ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಚರ್ಚೆಯಲ್ಲಿರುವ ಸ್ಯಾಂಟ್ರೋ ರವಿಯ ಪತ್ನಿ ವಿರುದ್ಧ ಮಾಡಿರುವ ಆರೋಪ ಇದೀಗ ಪೊಲೀಸ್ ಇನ್ಸ್ಪೆಕ್ಟರ್ ಪ್ರವೀಣ್ಗೆ ಉರುಳಾಗುವ ಸಾಧ್ಯತೆ ಕಂಡುಬಂದಿದೆ. ರವಿಯ ಷಡ್ಯಂತ್ರದಿಂದ ಕಾಟನ್‌ಪೇಟೆ ಠಾಣೆಯಲ್ಲಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಮೈಸೂರಿನ ವಿಜಯನಗರ ಠಾಣೆಯಲ್ಲಿ ಆತನ ಪತ್ನಿ ರಶ್ಮಿ ದೂರು ನೀಡಿದ್ದರು. ಅದರನ್ವಯ ಅಂದಿನ ಕಾಟನ್ ಪೇಟೆ ಇನ್ಸ್ಪೆಕ್ಟರ್ ಪ್ರವೀಣ್ ವಿರುದ್ಧ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿಗೆ ಆದೇಶಿಸಲಾಗಿತ್ತು. ಸದ್ಯ ತನಿಖೆ ಪೂರ್ಣಗೊಂಡಿದ್ದು ವರದಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಕೈ ಸೇರಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:ಪ್ರಕಾಶ್ ಎಂಬವರು ನೀಡಿದ್ದ ದೂರಿನನ್ವಯ ಕಾಟನ್ ಪೇಟೆ ಠಾಣೆಯಲ್ಲಿ ನವೆಂಬರ್ 24 ರಂದು ರಶ್ಮಿ, ನಯನ ಹಾಗೂ ಶೇಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿತ್ತು. 'ನನ್ನಿಂದ ಮೂರು ತಿಂಗಳ ಅವಧಿಗೆ ಐದು ಲಕ್ಷ ರೂಪಾಯಿ ಪಡೆದಿದ್ದ ರಶ್ಮಿ, ನವೆಂಬರ್ 23 ರಂದು ಸಂಜೆ 6 ಗಂಟೆಗೆ ಹಿಂತಿರುಗಿಸುವುದಾಗಿ ಕಾಟನ್ ಪೇಟೆಯ ಖೋಡೆ ಸರ್ಕಲ್ ಬಳಿ ಕರೆಸಿಕೊಂಡಿದ್ದರು. ಈ ವೇಳೆ ರಶ್ಮಿಯವರ ಜೊತೆಗಿದ್ದ ಶೇಕ್ ಎಂಬಾತ ನನ್ನ ಎರಡೂ ಕೈಗಳನ್ನು ಹಿಂದಿನಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದು, ರಶ್ಮಿ ತಮ್ಮ ಬಳಿಯಿದ್ದ ಚಾಕುವನ್ನು ಕುತ್ತಿಗೆಯ ಮೇಲಿಟ್ಟು ಬೆದರಿಸಿದ್ದಾರೆ. ಅವರ ಜೊತೆಗಿದ್ದ ನಯನ ಎಂಬಾಕೆ ಕತ್ತಿನಲ್ಲಿದ್ದ ಸುಮಾರು 13 ಗ್ರಾಂ ತೂಕದ ಚಿನ್ನದ ಚೈನ್ ಮತ್ತು ಪ್ಯಾಂಟ್ ಜೇಬಿನಲಿದ್ದ 9 ಸಾವಿರ ರೂಪಾಯಿಗಳನ್ನು ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.' ಎಂದು ಪ್ರಕಾಶ್ ದೂರು ದಾಖಲಿಸಿದ್ದರು.
ಇದನ್ನೂ ಓದಿ:ಸ್ಯಾಂಟ್ರನೋ ಹುಂಡೈಯೋ.. ಯಾವ ಬ್ರಾಂಡ್ಗಳು ಎಲ್ಲಿಲ್ಲೆವೆಯೋ ನಂಗೆ ಗೊತ್ತಿಲ್ಲ: ಸಚಿವ ಅಶ್ವತ್ಥನಾರಾಯಣ