ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸೇವೆಗಳಲ್ಲಿ ಪರಿಣಾಮಕಾರಿಯಾಗಿ ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಆಡಳಿತ ಸುಧಾರಣಾ ಆಯೋಗ -2 ಹಲವು ಶಿಫಾರಸ್ಸುಗಳನ್ನು ಮಾಡಿದೆ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಇಂದು ಭೇಟಿ ಮಾಡಿದ ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್ ಅವರು ಪ್ರಮುಖ 21 ಅಂಶಗಳನ್ನು ಒಳಗೊಂಡಿರುವ ವರದಿ ಸಲ್ಲಿಕೆ ಮಾಡಿದರು.
ವರದಿ ಸ್ವೀಕರಿಸಿದ ಬಳಿಕ ವಿಜಯ್ ಭಾಸ್ಕರ್ ಅವರೊಂದಿಗೆ ವರದಿ ಅಂಶಗಳ ಕುರಿತು ಚರ್ಚೆ ನಡೆಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಎರಡು ಮೂರು ಹಂತಗಳಲ್ಲಿ ವರದಿ ಅನುಷ್ಠಾನಗೊಳಿಸುವ ಭರವಸೆ ನೀಡಿದರು. ವರದಿಯಲ್ಲಿರುವ ಕೆಲವು ಶಿಫಾರಸುಗಳನ್ನು ಆರೋಗ್ಯ ಇಲಾಖೆ ಈ ಬಾರಿಯ ಬಜೆಟ್ ನಲ್ಲೇ ಅನುಷ್ಠಾನಗೊಳಿಸುತ್ತದೆ. ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಎಂಬಿಬಿಎಸ್ ವೈದ್ಯರನ್ನು ನಗರ ಪ್ರದೇಶಗಳಿಗೂ ಬಳಸಿಕೊಳ್ಳಲು ಈ ಬಾರಿಯ ಅಧಿವೇಶನದಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ನರ್ಸಿಂಗ್ ಕೋರ್ಸ್ ಗಳನ್ನ ಈಗಾಗಲೇ ಕೆಸಿ ಜನರಲ್ ಆಸ್ಪತ್ರೆಗಳಲ್ಲಿ ಪ್ರಾರಂಭಿಸಲಾಗಿದೆ. ತಾಲೂಕು ಮಟ್ಟದ ಪ್ರಮುಖ ಆಸ್ಪತ್ರೆಗಳಲ್ಲಿ ನರ್ಸಿಂಗ್ ಕೋರ್ಸ್ ಪ್ರಾರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಆಯೋಗದ ವರದಿಯ ಹೈಲೆಟ್ಸ್ ಇಲ್ಲಿದೆ:
* ಆರೋಗ್ಯ ಇಲಾಖೆಯಲ್ಲಿ ನರ್ಸಿಂಗ್ ನಿರ್ದೇಶನಾಲಯ ಸ್ಥಾಪನೆಗೆ ಶಿಫಾರಸ್ಸು.
* ಕಡ್ಡಾಯ ಗ್ರಾಮೀಣ ಸೇವೆಯಲ್ಲಿರುವ ಎಂಬಿಬಿಎಸ್ ವೈದ್ಯರನ್ನು ನಗರ ಪ್ರದೇಶಗಳಲ್ಲೂ ಬಳಕೆಗೆ ಸೂಚನೆ.
* ಕೇಂದ್ರ ವೈದ್ಯಕೀಯ ಸಂಸ್ಥೆಗಳ ಮಾದರಿಯಲ್ಲಿ ಎಲ್ಲಾ ಸರ್ಕಾರಿ ವೈದ್ಯರ private practice ನಿಷೇಧ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಜೆ ಒಪಿಡಿಗಳನ್ನು ಸಹ ಪ್ರಾರಂಭಿಸಲು ಸಲಹೆ.
* ತಾಲ್ಲೂಕು ಆಸ್ಪತ್ರೆಗಳಲ್ಲಿ ಒಳರೋಗಿಗಳು ಮತ್ತು ಹೆರಿಗೆಗಳ ಸಂಖ್ಯೆಯನ್ನು ಅವಲಂಬಿಸಿ, ಹೆಚ್ಚಿನ ಕೆಲಸದ ಹೊರೆ ಹೊಂದಿರುವ ತಾಲೂಕು ಆಸ್ಪತ್ರೆಗಳಿಗೆ ಹೆಚ್ಚುವರಿಯಾಗಿ 50 ಹೊಸ ಸಾಮಾನ್ಯ ಹಾಸಿಗೆಗಳನ್ನು ಮಂಜೂರು ಮಾಡಲು ಶಿಫಾರಸ್ಸು.
* ನಗರ ಪ್ರಾ.ಆ.ಕೇಂದ್ರಗಳಲ್ಲಿ ಸ್ತ್ರೀರೋಗ ತಜ್ಞ, ಮಕ್ಕಳ ವೈದ್ಯರು, ಅರಿವಳಿಕೆ ತಜ್ಞರು, ದಂತ ಶಸ್ತ್ರಚಿಕಿತ್ಸಕರು ವಾರಕ್ಕೊಮ್ಮೆ ಗಂಟೆಯ ಆಧಾರದ ಮೇಲೆ ಮತ್ತು ಮೂಳೆ ಚಿಕಿತ್ಸಕ, ಮನೋವೈದ್ಯರು, ಫಿಸಿಯೋಥೆರಪಿಸ್ಟ್, ಜೆರಿಯಾಟ್ರಿಶಿಯನ್ ತಿಂಗಳಿಗೊಮ್ಮೆ ಗಂಟೆಯ ಆಧಾರದ ಮೇಲೆ ತಜ್ಞರ ಸೇವೆಗಳನ್ನು ಪಡೆಯಲು ಎಆರ್ ಎಸ್‌ಗೆ ಹಣವನ್ನು ಒದಗಿಸಬಹುದು.