ಬೆಂಗಳೂರು :ಪಂಚಮಸಾಲಿ ಲಿಂಗಾಯತ ಉಪ ಜಾತಿಗೆ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ನೀಡುವ ಕುರಿತು ಹಿಂದುಳಿದ ವರ್ಗಗಳ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿಯನ್ನು ನ್ಯಾಯಪೀಠಕ್ಕೆ ಒದಗಿಸಲು ಸರ್ಕಾರ ಹೈಕೋರ್ಟ್‌ಗೆ ಕಾಲಾವಕಾಶ ಕೋರಿದೆ. ಪಂಚಮಸಾಲಿ ಲಿಂಗಾಯತ ಉಪ ಜಾತಿಗೆ ಪ್ರವರ್ಗ 2ಎ ಅಡಿ ಮೀಸಲಾತಿ ನೀಡುವ ಸಂಬಂಧದ ಸರ್ಕಾರದ ಪ್ರಕ್ರಿಯೆ ಪ್ರಶ್ನಿಸಿ ಬೆಂಗಳೂರಿನ ಡಿ.ಜಿ. ರಾಘವೇಂದ್ರ ಮತ್ತಿತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆಲೋಕ್ ಆರಾಧೆ ಮತ್ತು ವಿಶ್ವಜಿತ್ ಶೆಟ್ಟಿ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ಕಾಲಾವಕಾಶ ಕೋರಿದೆ.
ವಿಚಾರಣೆ ವೇಳೆ ಹಾಜರಾಗಿದ್ದ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಫೆಬ್ರವರಿ 2 ಎಂದು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.
ಇದಕ್ಕೂ ಮುಂಚೆ ಜನವರಿ 12ರಂದು ನಡೆದ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಮೂರ್ತಿ ಆಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ, ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡುವ ಸಂಬಂಧ ಯಾವುದೇ ಪ್ರಕ್ರಿಯೆಗಳನ್ನು ಮುಂದುವರೆಸದಂತೆ ಯತಾಸ್ಥಿತಿ ಕಾಯ್ದುಕೊಳ್ಳಲು ನಿರ್ದೇಶನ ನೀಡಿತ್ತು. ಆದರೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಅರ್ಜಿ ವಿಚಾರಣೆ ಹಂತದಲ್ಲಿದೆ. ಈ ನಡುವೆ ಮೀಸಲಾತಿ ನೀಡುವ ಸಂಬಂಧ ಸರ್ಕಾರ ಕೆಲ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದೆ. ಹೀಗಾಗಿ ತುರ್ತು ವಿಚಾರಣೆಗೆ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು.