ಬೆಂಗಳೂರು: ಮಂಗಳೂರು ಘನತ್ಯಾಜ್ಯ ವಿಲೇವಾರಿ ಘಟದ ಕಲುಷಿತ ನೀರು ಫಲ್ಗುಣಿ ನದಿ ಹಾಗೂ ಮರವೂರು ಜಲಾಶಯ ಸೇರುತ್ತಿದ್ದು, ನೀರಿನಲ್ಲಿ ವಿಷಕಾರಿ ಅಂಶಗಳಿರುವುದು ಪ್ರಯೋಗಾಲಯದ ಪರೀಕ್ಷೆಯಿಂದ ತಿಳಿದು ಬಂದಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಮಂಗಳೂರು ಘನತ್ಯಾಜ್ಯ ಭೂಭರ್ತಿ ಘಟಕ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಸಲ್ಲಿಸಿರುವ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಈ ವೇಳೆ, ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರಾದ ಗುರುರಾಜ ಜೋಷಿ, ನೀರಿನ ವಿಶ್ಲೇಷಣಾ ವರದಿ ಹಾಗೂ ಮಂಗಳೂರಿನ ಪರಿಸರ ಅಧಿಕಾರಿಯ ವರದಿ ಒಳಗೊಂಡ 22 ಪುಟಗಳ ವರದಿಯನ್ನು ಪೀಠಕ್ಕೆ ಸಲ್ಲಿಸಿದರು.
ವರದಿಯಲ್ಲಿ, ತ್ಯಾಜ್ಯ ಘಟಕದಿಂದ ಹರಿದು ಜಲಾಶಯ ಸೇರುತ್ತಿರುವ ನೀರಿನ ಮಾದರಿಯಲ್ಲಿ ಪರೀಕ್ಷೆ ಒಳಪಡಿಸಿದ್ದು, ನೀರಿನಲ್ಲಿ ಅಮೋನಿಯಕಲ್ ನೈಟ್ರೋಜನ್ ಮತ್ತು ಕಬ್ಬಿಣದ ಅಂಶ ನಿಗದಿಗಿಂತ ಹೆಚ್ಚಿದೆ. ಇದು ವಿಷಕಾರಿ. ಹೀಗಾಗಿ ಮಂಗಳೂರಿನ ಪ್ರಾದೇಶಿಕ ಪರಿಸರ ಅಧಿಕಾರಿ ಕೀರ್ತಿ ಕುಮಾರ್, ಭೂಭರ್ತಿ ಘಟಕದಿಂದ ಕಲುಷಿತ ನೀರು ಬಿಡದಂತೆ ಸೂಚಿಸಿದ್ದಾರೆ ಎಂದು ತಿಳಿಸಲಾಗಿತ್ತು.
ವರದಿ ಪರಿಶೀಲಿಸಿದ ಪೀಠ, ಕುಡಿಯಲು ಬಳಕೆ ಮಾಡುತ್ತಿರುವ ನೀರು ಕಲುಷಿತಗೊಂಡಿರುವುದು ತೀರಾ ಗಂಭೀರ ವಿಚಾರ, ನೀವು ಜನರಿಗೆ ನೀರಿನೊಂದಿಗೆ ವಿಷ ಕೊಡುತ್ತಿದ್ದೀರಾ..? ಶುದ್ಧ ಕುಡಿಯುವ ನೀರಿಗೆ ಏನು ವ್ಯವಸ್ಥೆ ಮಾಡಿದ್ದೀರಾ ಎಂದು ಮಂಗಳೂರು ಪಾಲಿಕೆಗೆ ತರಾಟೆಗೆ ತೆಗೆದುಕೊಂಡಿತು. ಅಲ್ಲದೇ, ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿರುವ ವರದಿಗೆ ಪ್ರತಿಕ್ರಿಯೆ ನೀಡುವಂತೆ ಸರ್ಕಾರ ಮತ್ತು ಮಂಗಳೂರು ಪಾಲಿಕೆಗೆ ಸೂಚಿಸಿ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿತು.
ಕಾನೂನು ಸೇವಾ ಪ್ರಾಧಿಕಾರದ ಪರ ವಕೀಲರು ವಾದಿಸಿ, ಪಚ್ಚನಾಡಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಕಪ್ಪು ಬಣ್ಣದ ಕಲುಷಿತ ನೀರು ಫಲ್ಗುಣಿ ನದಿಗೆ ಸೇರುತ್ತಿದೆ. ಈ ಕುರಿತು ಪ್ರಾಧಿಕಾರದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಈಗಾಗಲೇ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ.
ಫಲ್ಗುಣಿ ನದಿಗೆ ಮರವೂರು ಡ್ಯಾಂ ಕಟ್ಟಲಾಗಿದ್ದು, ಇಲ್ಲಿಂದಲೇ ಮಂಗಳೂರು ಸುತ್ತಲ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ, ನೀರು ವಿಷಕಾರಿ ಆಗಿರುವುದರಿಂದ ಪರ್ಯಾಯವಾಗಿ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ಇದನ್ನೂ ಓದಿ : ಬಿಹಾರದ ಪಿಸ್ತೂಲ್, ಹೊಳಲ್ಕೆರೆಯಲ್ಲಿ ಕೊಲೆ, ಇಂಡೋ-ಪಾಕ್ ಗಡಿಯಲ್ಲಿ ಅಡಗಿದ್ದ ಚಾಲಾಕಿಗಳು.. ರೋಚಕ ಕೊಲೆ ಕಹಾನಿ.!