ಬೆಂಗಳೂರು: ಕೆಎಸ್ಟಿಡಿಸಿ ಸಬ್ಸಿಡಿ ದರದಲ್ಲಿ ನೀಡುವ ಟ್ಯಾಕ್ಸಿ ವಿತರಣೆ ಯೋಜನೆ ಸ್ಥಿತಿಗತಿ ಬಗ್ಗೆ ಅಧ್ಯಯನ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.
ವಿಕಾಸಸೌಧದಲ್ಲಿ ಮಾತನಾಡಿದ ಅವರು, ಸಬ್ಸಿಡಿ ದರದಲ್ಲಿ ಕೆಎಸ್ಟಿಡಿಸಿಯಿಂದ ಟ್ಯಾಕ್ಸಿ ನೀಡಲಾಗುತ್ತಿದೆ. ಇದು ಉಪಯೋಗಕ್ಕೆ ಬರುತ್ತಿದಿಯಾ? ಇಲ್ಲವೋ ಅಂತಾ ವರದಿ ಪಡೆಯುತ್ತೇವೆ. ಇಡೀ ಯೋಜನೆ ಸ್ವಾವಲಂಬಿ ಮಾಡಬೇಕು ಹೊರತು ಫಲಾನುಭವಿಗಳನ್ನು ಸಾಲಗಾರರನ್ನಾಗಿ ಮಾಡಬಾರದು. ಜಿಲ್ಲೆಗಳಲ್ಲಿ ಬೇಡಿಕೆಯೇ ಇಲ್ಲದೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ಕೊಡಲಾಗುತ್ತಿದೆ. ಇದರಿಂದ ಫಲಾನುಭವಿಗಳಿಗೆ ಸಾಲದ ಹೊರೆ ಹೆಚ್ಚಿದೆ. 2017-18ರಲ್ಲಿ 2400ಜನರಿಗೆ ಸಬ್ಸಿಡಿ ದರದಲ್ಲಿ ಟ್ಯಾಕ್ಸಿ ವಿತರಣೆ ಮಾಡಲಾಗಿದೆ. ಇದರ ಲಾಭ ನಷ್ಟಗಳ ಬಗ್ಗೆ ಅಧ್ಯಯನ ವರದಿ ತರಿಸಿ ನಂತರ ಕ್ರಮ ಕೈಗೊಳ್ಳುತ್ತೇನೆ ಎಂದು ಸ್ಪಷ್ಟಪಡಿಸಿದರು.
40 ಪ್ರಮುಖ ಪ್ರವಾಸಿ ವರ್ತುಲಗಳನ್ನು ಗುರುತಿಸಲಾಗಿದೆ. ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇದೆ. ಪ್ರಧಾನಮಂತ್ರಿಗಳು ದೇಶವನ್ನು ಟೂರಿಸ್ಟ್ ಹಬ್ ಮಾಡಲು ಉದ್ದೇಶಿಸಿದ್ದಾರೆ. ಆ ಸಂಬಂಧ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಕೇಂದ್ರ ಗುರುತು ಮಾಡಿದೆ. ಪ್ರಮುಖವಾಗಿ 17 ಸ್ಥಳಗಳನ್ನು ಗುರುತಿಸಿದ್ದಾರೆ. ಅದರಲ್ಲಿ ಕರ್ನಾಟಕದ ಹಂಪಿ ಕೂಡ ಇದೆ. ಸರ್ಕಾರದಿಂದ ಯಾವ ರೀತಿಯ ಅಭಿವೃದ್ಧಿ ಮಾಡಬಹುದು ಎಂದು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದೇನೆ. ಖಾಸಗಿ ಆಸಕ್ತರನ್ನ ಸೇರಿಸಿ ಪ್ರವಾಸೋದ್ಯಮದಲ್ಲಿ ಹೂಡಿಕೆ ಆಕರ್ಷಿಸಲು ಚಿಂತನೆ ನಡೆದಿದೆ ಎಂದು ವಿವರಿಸಿದರು.