ಬೆಂಗಳೂರು:ಕಲಾಪದಲ್ಲಿ ಗೋಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ಅನುಮೋದನೆ ಸಂದರ್ಭ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿದ್ದರು. ಇದರಿಂದ ಧ್ವನಿಮತ ಮೂಲಕ ವಿಧೇಯಕ ಅನುಮೋದನೆ ಪಡೆದಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.
ತಮ್ಮ ಕೊಠಡಿಯಲ್ಲಿ ಕಾಂಗ್ರೆಸ್ ಸದಸ್ಯರ ಜತೆ ಮಾತುಕತೆ ನಂತರವೂ ಕಾಂಗ್ರೆಸ್ ಸದಸ್ಯರು ಧರಣಿ ವಾಪಸ್ ಪಡೆಯಲಿಲ್ಲ. ಸಭಾಪತಿಗಳು ವಾಪಸ್ ಆದ ನಂತರ ರೂಲಿಂಗ್ ನೀಡಿ, ತಾವು ಕಲಾಪವನ್ನು ಹೊರಗಿದ್ದು ವೀಕ್ಷಿಸಿದ ಹಾಗೂ ಕಡತದಲ್ಲಿ ಪರಿಶೀಲನೆ ನಡೆಸಿದ ಹಿನ್ನೆಲೆ ವಿಧೇಯಕ ಅನುಮೋದನೆಯಲ್ಲಿ ಧ್ವನಿ ಮತದ ಮೂಲಕ ಪಾಸ್ ಮಾಡಲಾಗಿದೆ ಎಂದು ರೂಲಿಂಗ್ ಕೊಟ್ಟರು. ನೀವು ನಿಮಗಿರುವ ನಿಯಮದಡಿ ನನಗೆ ನಿಮ್ಮ ವಾದ ಸಲ್ಲಿಕೆ ಮಾಡಿ. ನಾನು ನನ್ನ ಗಮನಕ್ಕೆ ಬಂದ ವಿಚಾರದ ಮೇಲೆ ರೂಲಿಂಗ್ ನೀಡಿದ್ದೇನೆ. ನನ್ನ ರೂಲಿಂಗ್ ನಂತರ ಪ್ರಶ್ನಿಸುವ ಅಧಿಕಾರ ಇಲ್ಲ. ನಿಯಮದಲ್ಲಿ ಅವಕಾಶ ಇದ್ದರೆ ನೀವು ಮಾಹಿತಿ ಸಲ್ಲಿಕೆ ಮಾಡಬಹುದು. ರೂಲಿಂಗ್ ನೀಡುವ ಮುನ್ನ ಮಾತನಾಡಬಹುದಿತ್ತು. ಈಗ ರೂಲಿಂಗ್ ನೀಡಿದ ನಂತರ ಪ್ರಶ್ನಿಸುವ ಅಧಿಕಾರ ಇಲ್ಲ ಎಂದರು.
ಕಾಂಗ್ರೆಸ್ ಸಚೇತಕ ನಾರಾಯಣ ಸ್ವಾಮಿ ಮಾತನಾಡಿ, ನಿನ್ನೆ ನಮ್ಮ ಸದಸ್ಯರು ಜಂಟಿ ಸದನ ಸಮಿತಿಗೆ ವಹಿಸುವಂತೆ ಒತ್ತಾಯಿಸಿದ ನಂತರವೇ ಬಾವಿಗಿಳಿದಿದ್ದೇವೆ. ಇದು ಸಂವಿಧಾನ ಬಾಹಿರವಾಗಿ ಜಾರಿಗೆ ಬಂದ ಅನುಮೋದನೆ ಆಗಿದೆ. ಈಗಲೂ ಚರ್ಚೆಗೆ ಅವಕಾಶ ನೀಡಬೇಕು ಎಂದರು. ಇವರ ಮಾತಿಗೆ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬೆಂಬಲ ನೀಡಿದರು. ಕಾಂಗ್ರೆಸ್ ಸದಸ್ಯರು ಸಾಕಷ್ಟು ಒತ್ತಡ ಹೇರಿದರೂ ಬೆಲೆ ಸಿಗದ ಹಿನ್ನೆಲೆ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರ ಭಾಷಣಕ್ಕೆ ಉತ್ತರ:
ಪ್ರತಿಪಕ್ಷಗಳ ಆಕ್ರೋಶ, ಘೋಷಣೆ ನಡುವೆಯೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ರಾಜ್ಯಪಾಲರ ಭಾಷದ ಮೇಲಿನ ಚರ್ಚೆಗೆ ಉತ್ತರ ನೀಡಿದರು. ರಾಜ್ಯದ ಅಭಿವೃದ್ಧಿಗೆ ಸತತ ಪರಿಶ್ರಮ ಮಾಡುತ್ತೇವೆ. ನಾವು ಜನರಿಗೆ ಅನುಕೂಲಕರವಾದ ಆಡಳಿತ ನೀಡಿದ್ದೇವೆ. ಕೊರೊನಾ ಸಂದರ್ಭದ ನಿರ್ವಹಣೆಯನ್ನೂ ಸಮರ್ಪಕವಾಗಿ ಮಾಡಿದ್ದೇವೆ. ಆರ್ಥಿಕ ಸ್ಥಿತಿ ಉತ್ತಮವಾಗಿದೆ. ರಾಜಸ್ವ ಸಂಗ್ರಹವೂ ಉತ್ತಮವಾಗಿದೆ. ತೆರಿಗೆ ಸಂಗ್ರಹ ಸಮರ್ಪಕವಾಗಿ ನಡೆಯುತ್ತಿದೆ. ನಾವು ಉತ್ತಮ ಆಡಳಿತ ನೀಡುತ್ತಿರುವುದಕ್ಕೆ ಉಪಚುನಾವಣೆ, ಲೋಕಸಭೆ ಚುನಾವಣೆ ಗೆಲುವು ಸಾಕ್ಷಿ. ಅಭಿವೃದ್ಧಿಗೆ ಹಿನ್ನೆಡೆ ಆಗಿಲ್ಲ. ಶೇ. 60ರಷ್ಟು ಅಭಿವೃದ್ಧಿ ಆಗಿದೆ. ಬಜೆಟ್ನಲ್ಲಿ ನೀಡಿದ ಭರವಸೆಯಲ್ಲಿ ಶೇ. 85ರಷ್ಟು ಈಡೇರಿಸುತ್ತೇವೆ. ನಮ್ಮ ಭರವಸೆ ಈಡೇರಿಕೆಗೆ ಬದ್ಧವಾಗಿದ್ದೇವೆ.