ಬೆಂಗಳೂರು: ಲಾಕ್ಡೌನ್ ನಂತರ ಮೊದಲ ಬಾರಿಗೆ ನಾಳೆಯಿಂದ ರಾಜ್ಯದ ಧಾರ್ಮಿಕ ಕ್ಷೇತ್ರಗಳು ದರ್ಶನಕ್ಕೆ ಮುಕ್ತವಾಗುತ್ತಿದ್ದು, ಸಿದ್ಧತೆಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ ಪಡೆದುಕೊಂಡಿದ್ದು, ಹೆಚ್ಚಿನ ಮುತುವರ್ಜಿ ವಹಿಸುವಂತೆ ಸೂಚಿಸಿದ್ದಾರೆ.
ಕೊರೊನಾ ಮುಂಜಾಗ್ರತಾ ಕ್ರಮವಾಗಿ ಮುಚ್ಚಲ್ಪಟ್ಟಿದ್ದ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದಂತೆ ಹಿಂದೂ ಧಾರ್ಮಿಕ ದತ್ತಿ ದೇವಾಲಯಗಳು ನಾಳೆಯಿಂದ ಭಕ್ತರಿಗೆ ಮುಕ್ತವಾಗುತ್ತಿವೆ. ವಕ್ಫ್ ಬೋರ್ಡ್ ವ್ಯಾಪ್ತಿಗೆ ಬರುವ ಮಸೀದಿಗಳು, ದರ್ಗಾಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಚರ್ಚ್ಗಳು, ಬೌದ್ಧ, ಜೈನ, ಸಿಖ್, ಪಾರ್ಸಿ ಸೇರಿದಂತೆ ಸರ್ವ ಜನಾಂಗದ ಧಾರ್ಮಿಕ ಸ್ಥಳಗಳು ನಾಳೆಯಿಂದ ಕೊರೊನಾ ಮಾರ್ಗಸೂಚಿಯಂತೆ ತೆರೆಯುತ್ತಿವೆ.
ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ವಕ್ಫ್ ಸಚಿವ ಪ್ರಭು ಚೌವ್ಹಾಣ್, ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್ ಅವರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಿದ್ಧತಾ ಕ್ರಮಗಳ ಕುರಿತು ಸಮಗ್ರವಾದ ಮಾಹಿತಿ ಪಡೆದುಕೊಂಡರು.