ಬೆಂಗಳೂರು: ಯಡಿಯೂರಪ್ಪ ಅಧಿಕಾರದಿಂದ ಇಳಿಯದೇ ಇದ್ದಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತಿರಲಿಲ್ಲ ಎಂದು ಹೊನ್ನಾಳಿ ಮಾಜಿ ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ. ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ’’ಯಡಿಯೂರಪ್ಪ ಸೈಕಲ್ ಓಡಿಸಿ, ಸ್ಕೂಟರ್ ಓಡಿಸಿ ಪಕ್ಷವನ್ನು ಅಧಿಕಾರಕ್ಕೆ ತಂದರು. ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯದೇ ಇದ್ದಿದ್ದರೆ ನಾವು ಅಧಿಕಾರದಿಂದ ಇಳಿಯೋಕೆ ಆಗುತ್ತಿರಲಿಲ್ಲ. ಯಡಿಯೂರಪ್ಪ ಅಧಿಕಾರದಲ್ಲಿದ್ದ ವೇಳೆ ಅವರನ್ನು ಆ ಸ್ಥಾನದಿಂದ ತೆಗೆದು ಹಾಕಲು ಅವರ ವಿರುದ್ದ ಮಾತನಾಡಿಸೋಕೆ ಬಿಟ್ಟರು. ಯಡಿಯೂರಪ್ಪ ಅವರನ್ನು ಯಾವ ಪುರುಷಾರ್ಥಕ್ಕಾಗಿ ಅಧಿಕಾರದಿಂದ ಕೆಳಗಿಳಿಸಿದ್ದೀರಿ..? ಮತ ಕೇಳೋಕೆ ಯಡಿಯೂರಪ್ಪರ ಮುಖ ಬೇಕು, ಅಧಿಕಾರ ಎಂಜಾಯ್ ಮಾಡಲು ಬಿಎಸ್ವೈ ಬೇಕು, ಪಕ್ಷ ಅಧಿಕಾರಕ್ಕೆ ತಂದ ನಂತರ ಯಡಿಯೂರಪ್ಪ ಬೇಡ ಅಲ್ಲವೇ‘‘ ಎಂದು ಸ್ವಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸಿದರು.
ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿ ಎಲ್ಲರನ್ನೂ ಮುಗಿಸಿಬಿಟ್ಟಿರಿ, ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ ಆಗಿದ್ದರು. ಆದರೆ, ಅವರ ಕೈಗಳನ್ನು ಕಟ್ಟಿ ಹಾಕಿದ್ದರು. ಅಣ್ಣಾ ಮಲೈ ಯಾರು? ಬೊಮ್ಮಾಯಿ ಅವರ ಮಾತನ್ನು ಅಣ್ಣಾಮಲೈ ಕೇಳಬೇಕಿತ್ತು, ಅವರಿಂದ ಬೊಮ್ಮಾಯಿ ಸೆಲ್ಯುಟ್ ಹೊಡೆಸಿಕೊಳ್ಳುತ್ತಿದ್ದವರು. ಆದರೆ, ಈಗ ನೀವು ಬೊಮ್ಮಾಯಿ ಅವರನ್ನೇ ಅಣ್ಣಾ ಮಲೈ ಮಾತು ಕೇಳುವಂತೆ ಮಾಡಿದಿರಿ ಎಂದು ಆಕ್ರೋಶ ಹೊರಹಾಕಿದರು.
ನಾಯಕರ ವರ್ತನೆಗಳೇ ಪಕ್ಷದ ಸೋಲಿಗೆ ಕಾರಣ- ರೇಣುಕಾಚಾರ್ಯ:ಪಕ್ಷದ ನಾಯಕರ ವರ್ತನೆಗಳೇ ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಕಾರಣ. ಪಕ್ಷ ಮತ್ತು ನಾಯಕರು ಸೂಜಿ ದಾರದಂತೆ ಕೆಲಸ ಮಾಡಬೇಕು. ಅದಕ್ಕಾಗಿಯೇ ಪಕ್ಷದ ಕಚೇರಿ ಕಟ್ಟಲಾಗಿದೆ. ಆದರೆ, ಬಿಜೆಪಿ ಕಚೇರಿಯಲ್ಲಿ ಕೆಲವರಿಗೆ ಬರೀ ಕತ್ತರಿ ಹಾಕೋದೇ ಕೆಲಸವಾಗಿದೆ. ಯಾರು ಮಾತನಾಡುತ್ತಾರೋ ಅವರನ್ನು ಮುಗಿಸೋದು ಅವರ ಕೆಲಸವಾಗಿದೆ.
ನಾನು ಸೋತಮೇಲೆ ಯಡಿಯೂರಪ್ಪ, ವಿಜಯೇಂದ್ರ ನನ್ನನ್ನು ಕರೆದು ಮಾತನಾಡಿದರು. ಆದರೆ ರಾಜ್ಯಾಧ್ಯಕ್ಷರಾದವರು ಒಂದು ಬಾರಿ ಆದರೂ ಮಾತಾಡಿದ್ರಾ..? ಪಾರ್ಟಿ ಆಫೀಸ್ನ್ನು ಕೆಲವರು ಕಾರ್ಪೊರೇಟ್ ಕಚೇರಿಯಾಗಿ ಮಾಡಿಕೊಂಡಿದ್ದರು ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.