ಬೆಂಗಳೂರು : ಕಾಂಗ್ರೆಸ್ ಪಕ್ಷದವರು ಅಲ್ಪಸಂಖ್ಯಾತ (Minority community)ರನ್ನು ಬಳಸಿ ಬಿಸಾಕಿದ್ದಾರೆ. ಅವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದನ್ನು ಅಲ್ಪಸಂಖ್ಯಾತರು ದಯವಿಟ್ಟು ಅರ್ಥ ಮಾಡಿಕೊಳ್ಳಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ(MP Renukacharya) ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ನಡೆದಿದೆ. ಅಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ( Zameer Ahmed) ಅವರನ್ನು ಕಡೆಗಣಿಸಿದ ಘಟನೆ ನಡೆದಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಬೆಂಬಲಿಗರನ್ನು ಮೂಲೆಗುಂಪು ಮಾಡುವ ಕೆಲಸ ಕಾಂಗ್ರೆಸ್ ಅಗ್ರಗಣ್ಯ ನಾಯಕಿಯಿಂದ ನಡೆಯುತ್ತಿದೆ.
ಕಾಂಗ್ರೆಸ್‌ನ ಬಣ ರಾಜಕೀಯದ ಕುರಿತಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಹೇಳಿಕೆ ನೀಡಿರುವುದು.. ಕಾಂಗ್ರೆಸ್ ರಾಜ್ಯಾಧ್ಯಕ್ಷರಿಗೆ ಸೂಚನೆ ಕೊಟ್ಟು ಸಿದ್ದರಾಮಯ್ಯ ಅವರನ್ನು ಕಡೆಗಣಿಸಲಾಗಿದೆ. ನೂರಕ್ಕೆ ನೂರು ರಾಜಕೀಯವಾಗಿ ಸಿದ್ದರಾಮಯ್ಯ ಬೆಂಬಲಿಗರನ್ನು ಮುಗಿಸುವ ಕೆಲಸ ಮಾಡ್ತಿದ್ದಾರೆ. ಇದನ್ನು ಜಮೀರ್ ಅಹಮದ್ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರು ಈವರೆಗೂ ನಾವು ಅಲ್ಪಸಂಖ್ಯಾತರ ಉದ್ಧಾರಕರು ಅಂತಾ ಹೇಳಿದ್ರು. ಆದರೆ, ಇದುವರೆಗೂ ಅವರು ಅಲ್ಪಸಂಖ್ಯಾತರನ್ನು ಉದ್ಧಾರ ಮಾಡಿಲ್ಲ. ಬದಲಾಗಿ ಯೂಸ್ ಅಂಡ್ ಥ್ರೋ ರೀತಿ ಬಳಸಿ ಬಿಸಾಕಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಅವರ ನೆನಪಾಗುತ್ತದೆ ಎಂದು ವ್ಯಂಗ್ಯವಾಡಿದರು.
'ಕಾಂಗ್ರೆಸ್ ದಾಖಲೆಗಳನ್ನು ಬಿಡುಗಡೆ ಮಾಡಲಿ':ಬಿಟ್ಕಾಯಿನ್ ಪ್ರಕರಣ ನಮ್ಮ ಅವಧಿಯಲ್ಲಿ ಆಗಿಲ್ಲ. ಕಾಂಗ್ರೆಸ್ ಶಾಸಕರ ಮಕ್ಕಳು ಇದರಲ್ಲಿ ಶಾಮೀಲಾಗಿದ್ದಾರೆ. ಕಾಂಗ್ರೆಸ್ ಪಕ್ಷದವರದ್ದು ಹಿಟ್ ಆ್ಯಂಡ್ ರನ್ ಸಂಸ್ಕೃತಿ. ಆರಂಭದಲ್ಲಿ ಮಾತಾಡ್ತಾರೆ, ಆಮೇಲೆ ಸುಮ್ಮನಾಗಿಬಿಡ್ತಾರೆ.
ತಾಕತ್ತಿದ್ದರೆ ಕಾಂಗ್ರೆಸ್ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅಧಿವೇಶನದಲ್ಲಿ ಚರ್ಚೆಗೆ ಬರ್ತೀರಾ? ಬನ್ನಿ ಉತ್ತರ ಕೊಡ್ತೇವೆ ಎಂದು ಸವಾಲು ಹಾಕಿದರು.
ಬಿಟ್ ಕಾಯಿನ್ ಕುರಿತಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ ರೇಣುಕಾಚಾರ್ಯ ಪ್ರತಿಕ್ರಿಯಿಸಿರುವುದು.. ದೇಶವನ್ನು ಲೂಟಿ ಹೊಡೆದವರು ಕಾಂಗ್ರೆಸ್ ಪಕ್ಷದವರು. ಪ್ರಿಯಾಂಕ್ ಖರ್ಗೆ ಹೇಗಿದ್ದವರು ಈಗ ಹೇಗಿದ್ದಾರೆ ಗೊತ್ತಿದೆ. ಬಿಜೆಪಿಯಿಂದ ಹೆಚ್ಚು ವಿಧಾನ ಪರಿಷತ್ ಸದಸ್ಯರು ಆಯ್ಕೆ ಆಗ್ತಾರೆ ಅನ್ನೋ ಹತಾಶ ಮನೋಭಾವನೆಯಿಂದ ಕಾಂಗ್ರೆಸ್ ಆರೋಪ ಮಾಡ್ತಿದೆ.
ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತಾ ಚುನಾವಣೆ ತನಕ ಇದನ್ನು ಮಾಡೋದಕ್ಕೆ ಹೊರಟಿದ್ದಾರೆ. ಅಧಿವೇಶನದಲ್ಲಿ ಚರ್ಚೆ ಮಾಡೋದಕ್ಕೂ ನಾವು ಸಿದ್ಧ ಇದ್ದೇವೆ. ನಾವು ಹಾವು ಬಿಡ್ತೀವಿ ಅಂತಾನೂ ಹೇಳಿಲ್ಲ. ಕಾಂಗ್ರೆಸ್‌ನವರದ್ದು ಯಾವ ಹಾವು ಅಂದ್ರೆ ಮಣ್ಣಮುಕ್ಕು ಹಾವಿನ ತರಹ. ಎರಡೂ ಕಡೆ ತಲೆ ಅದಕ್ಕೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ಪಕ್ಷ ಅವರ ಕಾಲೋನಿ, ಮಸೀದಿ, ಖಬರಿಸ್ತಾನ್ ಅಭಿವೃದ್ಧಿ ಮಾಡಿದೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಅಂಬೇಡ್ಕರ್ ಅಂತಾ ಹೇಳಿ, ಅವರನ್ನೇ ಸೋಲಿಸಿದರು. ಅಂಬೇಡ್ಕರ್ ಸೋಲಿಸಿದ್ದು ಗೊತ್ತಾದ ಬಳಿಕ ಕಾಂಗ್ರೆಸ್ ಕಡೆಗಣಿಸ್ತಿದ್ದಾರೆ. ಮೋದಿ ಆಡಳಿತದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತಾ ಹೇಳಿದ್ದೇವೆ.
ನಿನ್ನೆ ಬಂದಿದ್ದ ಇಮ್ರಾನ್ ಪ್ರತಾಪ್ ಗಡಿ, ನಾವು ಟಿಪ್ಪು ವಂಶಸ್ತರು. ನಾವು ಯಾರ ತಲೆ ಬೇಕಾದ್ರೂ ತೆಗೀತೀವಿ ಅಂತಾ ಹೇಳಿದ್ದಾರೆ. ಈ ಹೇಳಿಕೆ ಸರಿಯಲ್ಲ. ನೀವು ಈ ರೀತಿ ಹೇಳಿದ್ರೆ ನಾವು ಸುಮ್ಮನೆ ಕೂರಲ್ಲ. ಕರ್ನಾಟಕಕ್ಕೆ ಬಂದು ಈ ರೀತಿ ಹೇಳಿಕೆ ನೀಡಿದ್ರೆ, ನಾವು ಏನು ಮಾಡಬೇಕೋ ಮಾಡ್ತೀವಿ ಎಂದರು.
'ಬೇಷರತ್ ಕ್ಷಮೆ ಯಾಚಿಸಬೇಕು' :ನಿನ್ನೆ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಪ್ರತಾಪ್ ಗಡಿ ತಲೆ ತೆಗೆಯೋಕೂ ಸಿದ್ಧ ಅಂದಿದ್ದಾನೆ. ಸ್ವಾಮಿ ಇದು ತಾಲೀಬಾನ್ ಅಲ್ಲ. ನಮಗೂ ಗೊತ್ತಿದೆ. ಮತಾಂಧ ಟಿಪ್ಪು ಬಗ್ಗೆ ರಾಜಾರೋಷವಾಗಿ ಹೇಳಿದ್ದೀರಿ ಅಂದ್ರೆ. ಇದನ್ನು ನಾವು ಸಹಿಸೋದಿಲ್ಲ. ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಓದಿ:ಸಿದ್ದರಾಮಯ್ಯ ಪತ್ರ ಬರೆಯುವ ಮೊದಲೇ ನಾನು ಬೆಳೆ ಹಾನಿ ಸಮೀಕ್ಷೆಗೆ ಸೂಚನೆ ಕೊಟ್ಟಿದ್ದೆ : ಸಿಎಂ ಬೊಮ್ಮಾಯಿ