ಬೆಂಗಳೂರು:ಹಾನಗಲ್ ಕ್ಷೇತ್ರದಲ್ಲಿ ವೈಯಕ್ತಿಕ ವರ್ಚಸ್ಸಿನಿಂದ ಶ್ರೀನಿವಾಸ ಮಾನೆ ಗೆದ್ದಿದ್ದಾರೆ. ಅದು ಕಾಂಗ್ರೆಸ್ ಪಕ್ಷದ ಗೆಲುವಲ್ಲ. ಹಾಗಾಗಿ ಈ ಗೆಲುವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲು ಹೋಗಬೇಡಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.
ಸರ್ಕಾರಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಂದಗಿ, ಹಾನಗಲ್ ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಒಂದು ಕ್ಷೇತ್ರದಲ್ಲಿ ಗೆದ್ದು ಮತ್ತೊಂದರಲ್ಲಿ ಸೋತಿದ್ದೇವೆ. ಹಾನಗಲ್ನಲ್ಲಿ ಉದಾಸಿ ತುಂಬಾ ಒಳ್ಳೆಯ ಕೆಲಸ ಮಾಡಿದ್ದರು. ಅವರ ಬಗ್ಗೆ ಒಳ್ಳೆಯ ಗೌರವ ಕ್ಷೇತ್ರದ ಜನರಿಗೆ ಇತ್ತು ಆದರೆ ವಯಸ್ಸಿನ ಕಾರಣಕ್ಕಾಗಿ ಮತ್ತು ಅನಾರೋಗ್ಯದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪ್ರವಾಸ ಮಾಡಲು ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಸಹಜವಾಗಿ ಮತ್ತೊಬ್ಬರ ಕಡೆ ಜನರು ಒಲವು ಹೊಂದುತ್ತಾರೆ. ಶ್ರೀನಿವಾಸ ಮಾನೆ ಕೊರೊನಾ ಬಂದ ಸಂದರ್ಭದಲ್ಲಿ ಎಲ್ಲಾ ಕಡೆ ಪ್ರವಾಸ ಮಾಡಿ ಜನರ ಮಧ್ಯೆ ಇದ್ದು ಕೆಲಸ ಮಾಡಿದರು ಆಹಾರ ಕಿಟ್ ವಿತರಿಸಿದರು. ಇದು ಅವರ ಕೈಹಿಡಿಯಿತು. ಇದು ಮಾನೆ ಗೆಲುವೇ ಹೊರತು ಕಾಂಗ್ರೆಸ್ ಗೆಲುವಲ್ಲ ಎಂದರು.
ಉಪ ಚುನಾವಣೆ ವೇಳೆ ಕಾಂಗ್ರೆಸ್ನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದುರಹಂಕಾರದಿಂದ ಹೇಳಿಕೆ ಕೊಡುತ್ತಿದ್ದರು. ಸಂಘಪರಿವಾರ ಮತ್ತು ಮೋದಿ ಬಗ್ಗೆ ಹೀನಾಯವಾಗಿ ಏಕವಚನದಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಟೀಕೆ ಮಾಡಿದರು. ಎಸ್ಸಿ-ಎಸ್ಟಿ ಹಿಂದುಳಿದ ವರ್ಗದವರು ಈಗಾಗಲೇ ಕಾಂಗ್ರೆಸ್ಸಿಂದ ದೂರವಾಗಿದ್ದಾರೆ. ಈಗ ಅಲ್ಪಸಂಖ್ಯಾತರ ಮತಗಳು ದೂರವಾಗುತ್ತವೆ. ಇದು ಕಾಂಗ್ರೆಸ್ ಗೆಲುವಲ್ಲ. ಶ್ರೀನಿವಾಸ್ ಮಾನೆಯವರ ವೈಯಕ್ತಿಕ ಗೆಲವು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆಲುವಲ್ಲ. 2023ರಲ್ಲಿ ನಾವೇ ಇಲ್ಲಿ ಗೆದ್ದೇ ಗೆಲ್ಲುತ್ತೇವೆ. ಬಿಜೆಪಿ ಅಧಿಕಾರಕ್ಕೆ ಮತ್ತೆ ಬರಲಿದೆ ಎಂದರು.