ಬೆಂಗಳೂರು:ಪಂಚರಾಜ್ಯ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬ್ಯಾಕ್ ಗೇಟ್ ಹುಡುಕಿಕೊಳ್ಳಬೇಕು. ಕಾಂಗ್ರೆಸ್ನಲ್ಲಿ ನಾಯಕತ್ವವೇ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಲೇವಡಿ ಮಾಡಿದರು.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ದೂಳೀಪಟವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್ ವರ್ಚಸ್ಸು, ಅಭಿಮಾನದಿಂದ ಯುಪಿಯಲ್ಲಿ ಗೆಲುವು ಸಿಕ್ಕಿದೆ. ನಾಲ್ಕು ರಾಜ್ಯಗಳಲ್ಲಿ ಮತದಾರರು ಆಶೀರ್ವಾದ ಮಾಡಿದ್ದಾರೆ ಎಂದರು.
ಪಂಜಾಬಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು, ಈಗ ಕಳೆದುಕೊಂಡಿದೆ. ಇನ್ನು ಗೋವಾಕ್ಕೆ ಹೋಗಿ ಅಧಿಕಾರಕ್ಕೆ ತರುತ್ತೇವೆ ಎಂದು ರಾಜಕೀಯ ಮಾಡಿದರು. ಪಾದಯಾತ್ರೆ ಮೂಲಕ ದೊಂಬರಾಟ ಮಾಡಿದರು ಎಂದು ಟೀಕಿಸಿದರು.
ಸಂಪುಟ ಪುನಾರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆಗೆ ಇನ್ನೂ ಕೇವಲ 13 ತಿಂಗಳು ಮಾತ್ರ ಬಾಕಿ ಇದೆ. ನಾಲ್ಕು ಸ್ಥಾನಗಳು ಮಾತ್ರ ಬಾಕಿ ಇವೆ. ಆದಷ್ಟು ಬೇಗ ಅದನ್ನು ತುಂಬಿಸುವ ಕೆಲಸ ಮಾಡಬೇಕು. ಈ ಬಗ್ಗೆ ವರಿಷ್ಠರು ಹಾಗೂ ಮುಖ್ಯಮಂತ್ರಿಗಳು ತೀರ್ಮಾನ ಮಾಡ್ತಾರೆ ಎಂದು ಹೇಳಿದರು.
ಇದನ್ನೂ ಓದಿ: ಪಕ್ಷದ ತತ್ವ ಸಿದ್ಧಾಂತಗಳೇ ಅದ್ಭುತ ವಿಜಯಕ್ಕೆ ಕಾರಣ: ಪ್ರಧಾನಿ ಮೋದಿ