ಬೆಂಗಳೂರು: ಈಗ ಸಚಿವ ಸಂಪುಟ ವಿಸ್ತರಣೆ ಮಾಡಿದರೆ ವಿಧಾನಸೌಧದ ಮೂರನೇ ಮಹಡಿಗೆ ಸೀಮಿತವಾಗಿರುತ್ತದೆ. ಸಚಿವರಾದ ಮೇಲೆ ತಿಳಿಯೋದು ಬಹಳ ಇರುತ್ತದೆ, ವಿಭಾಗವಾರು ಕಮಿಟಿ ಮಾಡಬೇಕಾಗುತ್ತದೆ. ಅನೇಕ ಶಾಸಕರು ಸಂಪುಟ ವಿಸ್ತರಣೆಗೆ ಅಪೇಕ್ಷೆ ಪಟ್ಟಿದ್ದರು. ಆದರೆ, ವಿಳಂಬವಾಗಿದೆ. ಈ ಬಗ್ಗೆ ನಾನು ಹೆಚ್ಚು ಮಾತಾಡಲು ಇಷ್ಟಪಡಲ್ಲ ಎಂದು ಪರೋಕ್ಷವಾಗಿ ಸಂಪುಟ ವಿಸ್ತರಣೆ ವಿಳಂಬಕ್ಕೆ ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಸಿ ಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೆವೆನ್ ಮುನಿಸ್ಟರ್ಸ್ ಕ್ವಾಟ್ರಸ್ ನಲ್ಲಿರುವ ಅಧಿಕೃತ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಗ್ರಾಮ ಪಂಚಾಯ್ತಿ ಸದಸ್ಯ ಆಗಿರುವವನು ಅಧ್ಯಕ್ಷ ಆಗಲು ಬಯಸುತ್ತಾನೆ. ಹಾಗೆಯೇ ಶಾಸಕರು ಸಚಿವರಾಗಲು ಬಯಸುವುದು ಸಹಜ. ನಮ್ಮ ಪಕ್ಷದಲ್ಲಿ ಬೇರೆ ಬೇರೆ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಆದರೆ, ಈಗ ಚುನಾವಣಾ ಕಾಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಕಡೆ ಗಮನ ಹೆಚ್ಚು ಕೊಟ್ಟಿದ್ದಾರೆ. ಹೈಕಮಾಂಡ್ ಏನೇ ನಿರ್ಧಾರ ಮಾಡಿದರೂ ನಾವು ಬದ್ಧರಾಗಿರುತ್ತೇವೆ ಎಂದರು.
ಸದ್ಯ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ. ಈ ಹಿಂದೆಯೇ ಆ ಐದು ಸ್ಥಾನಗಳನ್ನು ತುಂಬಿಸಿಕೊಂಡಿದ್ದಿದ್ದರೆ ಸಂಘಟನೆ ಇನ್ನಷ್ಟು ಆಗುತ್ತಿತ್ತು. ಹೊಸ ಮುಖಗಳಿಗೆ ಸಂಪುಟದಲ್ಲಿ ಆದ್ಯತೆ ಕೊಡಬೇಕಿತ್ತು. ಹಾಲಿ ಸಚಿವರಿಗೆ ಹೆಚ್ಚುವರಿ ಕೊಡದೇ ಹೊಸಬರನ್ನು ಸಚಿವರಾಗಿ ಮಾಡಬೇಕಿತ್ತು. ಆದರೆ ಈಗ ವಿಳಂಬವಾಗಿದೆ ಎಂದರು.
ಬಿಎಸ್ವೈ ಹಸ್ತಕ್ಷೇಪ ಇಲ್ಲ:ನಿಗಮ ಮಂಡಳಿ ನೇಮಕ ಕೂಡ ಮುಖ್ಯಮಂತ್ರಿಗಳ ಪರಮಾಧಿಕಾರ, ಇದರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಹಸ್ತಕ್ಷೇಪ ಇಲ್ಲ. ಯಡಿಯೂರಪ್ಪ ಅವರು ಸರ್ಕಾರದಲ್ಲಿ ಮಧ್ಯಪ್ರವೇಶ ಮಾಡಲ್ಲ. ಬೊಮ್ಮಾಯಿಯವರ ನೇತೃತ್ವದಲ್ಲಿ ಸರ್ಕಾರ ಚೆನ್ನಾಗಿ ನಡೀತಿದೆ ಅಂತ ಈಗಾಗಲೇ ಯಡಿಯೂರಪ್ಪ ಹೇಳಿದ್ದಾರೆ ಎಂದು ಆಡಳಿತದಲ್ಲಿ ಬಿಎಸ್ವೈ ಹಸ್ತಕ್ಷೇಪದ ಆರೋಪವನ್ನು ತಳ್ಳಿಹಾಕಿದರು.