ಬೆಂಗಳೂರು:ಹೈಕಮಾಂಡ್ ಭೇಟಿಗೆ ಮುಂದಾಗಿದ್ದ ಆಪ್ತ ಶಾಸಕರ ಬಣದ ನಿಯೋಗಕ್ಕೆ ನವದೆಹಲಿ ಪ್ರವಾಸ ಕೈಗೊಳ್ಳದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕೊನೆ ಕ್ಷಣದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ನೇತೃತ್ವದ ಶಾಸಕರ ನಿಯೋಗ ಪ್ರವಾಸವನ್ನು ರದ್ದುಗೊಳಿಸಿದೆ.
ಇಂದು ರಾತ್ರಿ ನವದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಸ್ವಕ್ಷೇತ್ರ ಹೊನ್ನಾಳಿಯಿಂದ ಬೆಂಗಳೂರಿಗೆ ಬಂದಿದ್ದರು. ಆದರೆ ದೂರವಾಣಿ ಕರೆ ಮಾಡಿದ ಸಿಎಂ ಯಡಿಯೂರಪ್ಪ, ದೆಹಲಿಗೆ ತೆರಳದಂತೆ ಸೂಚನೆ ನೀಡಿದರು. ಹೀಗಾಗಿ ಶಾಸಕರ ನಿಯೋಗ ತನ್ನ ಪ್ರವಾಸವನ್ನು ತಾತ್ಕಾಲಿಕವಾಗಿ ರದ್ದುಪಡಿಸಿದ್ದು, ಮತ್ತೊಮ್ಮೆ ಹೈಕಮಾಂಡ್ ನಾಯಕರ ಅನುಮತಿ ಪಡೆದು ತೆರಳಲು ನಿರ್ಧರಿಸಿದೆ.
ನಾಯಕತ್ವ ಬದಲಾವಣೆ ಮಾಡದಂತೆ ಹೈಕಮಾಂಡ್ಗೆ ಮನವಿ ಸಲ್ಲಿಸಿ ಯಡಿಯೂರಪ್ಪ ಅವರನ್ನೇ ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು ಎಂದು ಆಗ್ರಹಿಸಿದ್ದ ರೇಣುಕಾಚಾರ್ಯ, ಸಿಎಂ ಪರ ಶಾಸಕರ ಸಹಿ ಸಂಗ್ರಹಿಸಿದ್ದರು. ಶಾಸಕರ ಸಹಿವುಳ್ಳ ಪತ್ರವನ್ನು ಹೈಕಮಾಂಡ್ಗೆ ನೀಡಿ ಯಡಿಯೂರಪ್ಪ ಮುಂದುವರಿಕೆಗೆ ಮನವಿ ಮಾಡಲೆಂದು ಶಾಸಕರ ನಿಯೋಗದೊಂದಿಗೆ ತೆರಳಲು ರೇಣುಕಾಚಾರ್ಯ ನಿರ್ಧರಿಸಿದ್ದರು. ಆದರೆ ಈಗ ಈ ಪ್ರವಾಸ ಮೊಟಕುಗೊಂಡಿದೆ.