ಬೆಂಗಳೂರು:ಕಮಿಷನ್ ಆರೋಪ ಮಾಡಿರುವ ದಿಂಗಾಲೇಶ್ವರ ಶ್ರೀಗಳಿಗೆ ತಲೆ ಸರಿ ಇಲ್ಲ. ಕಾವಿ ಹಾಕಿದ ಮೇಲೆ ಧರ್ಮ ಬೋಧನೆ ಮಾಡಬೇಕು. ಮಾನವ ಧರ್ಮಕ್ಕೆ ಜಯವಾಗಬೇಕು ಎನ್ನಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.
ಕೆಲವು ಗುತ್ತಿಗೆದಾರರು ಕಾಂಗ್ರೆಸ್ ಹೇಳಿದಂತೆ ಕೇಳ್ತಿದ್ದಾರೆ. 40 ಪರ್ಸೆಂಟ್ ಅಂತ ಡ್ರಾಫ್ಟ್ ಹಾಕಿಸಿದ್ದಾರೆ. ಇದು ಭೂತದ ಬಾಯಲ್ಲಿ ಭಗದ್ಗೀತೆ ಹೇಳಿದಂತಾಯ್ತು. ಭ್ರಷ್ಟಾಚಾರ ಹುಟ್ಟಿದ್ದೇ ಕಾಂಗ್ರೆಸ್ನವರಿಂದ. ದಾಖಲೆ ಇದ್ದರೆ ಕೆಂಪಣ್ಣ ಬಿಡುಗಡೆ ಮಾಡಲಿ. ನಮ್ಮ ಸರ್ಕಾರಕ್ಕೆ ಯಾರನ್ನು ಕೇಳಿ ತನಿಖೆ ಮಾಡಬೇಕು ಅನ್ನೋದು ಗೊತ್ತು. ಲೋಕಸಭೆಯಲ್ಲಿ ನಿಮಗೆ ಅಡ್ರೆಸ್ ಇದ್ಯಾ? ಎಂದು ವಾಗ್ದಾಳಿ ನಡೆಸಿದರು.
'ಮೋದಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ': ಕಾಂಗ್ರೆಸ್ ಮುಖಂಡರಿಗೆ ಬಿಜೆಪಿ ಪಕ್ಷದ ಬಗ್ಗೆ ಮೋದಿ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯ ಹಳೆಯದನ್ನು ಮರೆತಿದ್ದಾರೆ ಅನ್ಸುತ್ತೆ. ಜೆಡಿಎಸ್ನಲ್ಲಿ ಇದ್ದಾಗ ಸೋನಿಯ ಗಾಂಧಿ, ಕಾಂಗ್ರೆಸ್ಗೆ ಬಳಸಿದ ಭಾಷೆಯ ಬಗ್ಗೆ ದಾಖಲೆ ಇದೆ. ಕಾಂಗ್ರೆಸ್ ಕಿತ್ತೊಗೆಯಬೇಕು ಎಂದು ಇತ್ತೀಚೆಗೆ ನೀಡಿದ್ದ ಹೇಳಿಕೆ ಬಗ್ಗೆ ವಿಡಿಯೋ ದಾಖಲೆ ಇದೆ. ಎಲ್ಲೋ ಒಂದು ಕಡೆ ಸಿದ್ದರಾಮಯ್ಯ, ಡಿಕೆಶಿ, ಮೋದಿ ಟಾರ್ಗೆಟ್ ಮಾಡಿದ್ರೆ, ಮೋದಿ ಬೈದರೆ ನಾವು ಅಧಿಕಾರಕ್ಕೆ ಬರಬಹುದು ಎಂಬ ಭ್ರಮಾಲೋಕದಲ್ಲಿ ಇದ್ದಾರೆ. ಅವರೆಲ್ಲಾ ಈಗ ಸಮಾಜವಾದಿಗಳಲ್ಲ ಮೋಜುವಾದಿಗಳಾಗಿದ್ದಾರೆ ಎಂದರು.
ಇದನ್ನೂ ಓದಿ:PSI ನೇಮಕಾತಿ ಅಕ್ರಮ: ಕೈ ಶಾಸಕರ ಗನ್‌ಮ್ಯಾನ್ ಸೇರಿ ಇಬ್ಬರು ಕಾನ್ಸ್ಟೇಬಲ್ ಬಂಧನ