ಬೆಂಗಳೂರು/ಮೈಸೂರು: ಕನ್ನಡ ಸಾಹಿತ್ಯ ಲೋಕದಲ್ಲಿ ಜಿ ಹೆಚ್ ನಾಯಕ್ ಎಂದು ಚಿರಪರಿಚಿತರಾಗಿದ್ದ ಗೋವಿಂದ ರಾಯ ಹಮ್ಮಣ್ಣ ನಾಯಕ್ ಅವರು ಮೈಸೂರಿನ ಸರಸ್ವತಿ ಪುರಂನ ಸ್ವಗೃಹದಲ್ಲಿ ಇಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ವಿದೇಶದಲ್ಲಿ ಇರುವ ಅವರ ಕುಟುಂಬದವರು ಶನಿವಾರ ಮೈಸೂರಿಗೆ ಆಗಮಿಸಲಿ, ನಾಳೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಜೆ ಹೆಚ್ ನಾಯಕ್ ಅವರು 1935 ಸೆಪ್ಟಂಬರ್ 18ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಬಳಿಕ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಮೈಸೂರಿನಲ್ಲಿ ನೆಲೆಸಿದ್ದರು.
ಜಿ ಹೆಚ್ ನಾಯಕ್ ಅವರ ಕೃತಿ, ಬರಹಗಳು:ಖ್ಯಾತ ವಿಮರ್ಶಕ ಜಿ ಹೆಚ್ ನಾಯಕ್ ಅವರು ವಿಮರ್ಶಕರು, ಬರಹಗಾರರು, ಸಾಹಿತಿಗಳು ಆಗಿದ್ದರು. ಅವರು ಬರೆದ ಪ್ರಮುಖ ಕೃತಿಗಳೆಂದರೆ ಸಮಕಾಲೀನ (1973), ಅನಿವಾರ್ಯ (1980), ನಿರಪೇಕ್ಷೆ (1984), ನಿಜದನಿ, ವಿನಯ ವಿಮರ್ಶೆ, ಸಕಾಲಿಕ, ಗುಣ ಗೌರವ (2002), ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ, ಕೃತಿ ಸಾಕ್ಷಿ, ಸ್ಥಿತಿ ಪ್ರಜ್ಞೆ, ಮತ್ತೆ ಮತ್ತೆ ಪಂಪ, ಸಾಹಿತ್ಯ ಸಮೀಕ್ಷೆ, ಉತ್ತರಾರ್ಧ ಹೀಗೆ ಅನೇಕ ಕೃತಿಗಳು ಹಾಗೂ ವಿಮರ್ಶಾತ್ಮಕ ಕೃತಿಗಳನ್ನು ಅವರು ಬರೆದಿದ್ದಾರೆ.
ಜೊತೆಗೆ ಅವರ ಸಂಪಾದನೆ ಗ್ರಂಥಗಳನ್ನು ಕೂಡ ರಚಿಸಿದ್ದು, ಅವುಗಳಲ್ಲಿ ಪ್ರಮುಖವಾದವು ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳು, ಸಂವೇದನೆ (ಅಡಿಗರ ಗೌರವ ಗ್ರಂಥ), ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ, ಶತಮಾನದ ಕನ್ನಡ ಸಾಹಿತ್ಯ (ಸಂಪುಟ - 1,2) ಮತ್ತು ಅವರ ಆತ್ಮಕಥನ - 'ಬಾಳು' ರಚಿಸಿದ್ದಾರೆ.
ಸಂದ ಪ್ರಶಸ್ತಿಗಳು: ನಾಯಕ್ ಅವರ ಉತ್ತರಾರ್ಧ ಕೃತಿಗೆ 2014 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದ್ದು, ಅವರ ನಿರಪೇಕ್ಷ ವಿಮರ್ಶಾ ಕೃತಿಗೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಪ್ರಶಸ್ತಿ ಸಂದಿದೆ. ನಿಜದನಿ ವಿಮರ್ಶಾ ಕೃತಿಗೆ 'ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ' ಲಭಿಸಿವೆ, ಜೊತೆಗೆ ಪಂಪ ಪ್ರಶಸ್ತಿಯೂ ಬಂದಿದೆ.
ಸಿಎಂ ಸಂತಾಪ:
ಕನ್ನಡದ ಖ್ಯಾತ ಲೇಖಕ ಹಾಗೂ ವಿಮರ್ಶಕ ಜಿ.ಹೆಚ್ ನಾಯಕ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕನ್ನಡ ಸಾಹಿತ್ಯದ ವಿಮರ್ಶೆ, ವಿಶ್ಲೇಷಣೆ ಹಾಗೂ ಬರಹಲೋಕದ ಅಪರೂಪದ ವ್ಯಕ್ತಿ. ಪ್ರಗತಿಪರ ಚಿಂತಕರು,ಸೌಜನ್ಯಶೀಲ, ನಿಷ್ಠುರ ವಿಮರ್ಶಕರಾದ ನಾಯಕ್ ಅವರು ಪೂರ್ವಾಗ್ರಹವಿಲ್ಲದ ಅಪ್ಪಟ ಮಾನವೀಯ ಮನಸ್ಸುಳ್ಳವರಾಗಿದ್ದರು. ನಾಯಕ್ ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿ ಸಲ್ಲಿಸಿದ ಸೇವೆ ಅನನ್ಯ. ಹಂಪಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕಾವ್ಯಾಧ್ಯಯನ ಪೀಠದ ಪ್ರಾಧ್ಯಾಪಕರಾಗಿಯೂ ಅವರ ಸೇವೆ ಗಮನಾರ್ಹ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಮಕಾಲೀನ, ಅನಿವಾರ್ಯ ನಿರಪೇಕ್ಷ ಸೇರಿದಂತೆ ಹಲವಾರು ವಿಮರ್ಶಾ ಕೃತಿಗಳು ಹಾಗೂ ಸಾಹಿತ್ಯ ಕೃತಿಗಳನ್ನು ಸಂಪಾದಿಸಿದ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಸಾಹಿತ್ಯ ವಿಮರ್ಶೆ ಪ್ರಶಸ್ತಿಯೂ ಒಳಗೊಂಡಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕದ ಪ್ರಖರ ಚಿಂತಕರೊಬ್ಬರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬ ಹಾಗೂ ಅಪಾರ ಅಭಿಮಾನಿಗಳಿಗೆ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂತಾಪ:ಮೈಸೂರಿನಲ್ಲಿ ನೆಲೆಸಿದ್ದ ಕನ್ನಡದ ಖ್ಯಾತ ವಿಮರ್ಶಕ, ಪ್ರಾಧ್ಯಾಪಕ ಜಿ.ಎಚ್.ನಾಯಕ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕಿನ ಸೂರ್ವೆಯಲ್ಲಿ ಜನಿಸಿದ್ದ ಜಿ.ಎಚ್.ನಾಯಕರು. ಪ್ರಾಧ್ಯಾಪಕರಾಗಿ ನಿವೃತ್ತರಾದ ನಂತರ ಅವರು ಮೈಸೂರಿನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಕನ್ನಡದ ಅತ್ಯುತ್ತಮ ವಿಮರ್ಶಕರಲ್ಲೊಬ್ಬರಾಗಿದ್ದ ಅವರ ಅನೇಕ ಪುಸ್ತಕಗಳು ಪ್ರಕಟವಾಗಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಿ.ಎಂ.ಇನಾಂದಾರ ಸ್ಮಾರಕ ಬಹುಮಾನ ಲಭಿಸಿವೆ. ಅವರ ಸಾಹಿತ್ಯ ಕೃಷಿ ಎಲ್ಲರಿಗೂ ಪ್ರಿಯವಾಗಿತ್ತು. ದೇವರು ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ, ಕುಟುಂಬದವರಿಗೆ ಈ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.
ಜನಪ್ರಿಯ ವಿಮರ್ಶಕ:ಜಿ.ಎಚ್.ನಾಯಕ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತ ವಿಮರ್ಶಕ. ಗೋವಿಂದರಾಯ ಹಮ್ಮಣ್ಣ ನಾಯಕ ಎಂಬ ಹೆಸರಿನವರಾಗಿದ್ದ ಅವರು, ಶುಕ್ರವಾರ ತಮ್ಮ 88ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. 1935 ಸೆಪ್ಟೆಂಬರ್ 18 ರಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆ ಗ್ರಾಮದಲ್ಲಿ ಜನಿಸಿದ್ದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಮುಂದೆ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಇವರು ಮೈಸೂರಿನಲ್ಲಿ ನೆಲೆಸಿದ್ದರು.
ಸಮಕಾಲೀನ,ಅನಿವಾರ್ಯ, ನಿರಪೇಕ್ಷೆ, ಸಮೀಕ್ಷೆ, ಹರಿಶ್ಚಂದ್ರ, ನಿಜದನಿ, ಉತ್ತರಾರ್ಧ, ಸಾಹಿತ್ಯ ಹಲವಾರು ಕೃತಿಗಳನ್ನು ಬರೆದಿದ್ದಾರೆ. ಕನ್ನಡಸಣ್ಣಕಥೆಗಳು, ಹೊಸಗನ್ನಡ ಕವಿತೆಗಳು, ಸಂವೇದನೆ, ಶ್ರಿರಾಮಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ ಸಂಪಾದನೆ ಮಾಡಿದ್ದರು. ಬಾಳು ಎಂಬ ತಮ್ಮ ಆತ್ಮಕಥವನ್ನು ಕೂಡಾ ಅವರು ರಚಿಸಿದ್ದಾರೆ.
ಇದನ್ನೂಓದಿ:ತಾಕತ್ತಿದ್ದರೆ ಆರ್ಎಸ್ಎಸ್, ಬಜರಂಗದಳ ನಿಷೇಧಿಸಲಿ: ಕಾಂಗ್ರೆಸ್ಗೆ ಮಾಜಿ ಸಿಎಂ ಬೊಮ್ಮಾಯಿ ಸವಾಲು