ಬೆಂಗಳೂರು: ಪಠ್ಯ ಪರಿಷ್ಕರಣೆ, ಪಠ್ಯ ಬದಲಾವಣೆ ಮಾಡಲು ನಿಯಮವಿದೆ. ಸಮಿತಿ ರಚಿಸಿ ಪರಿಷ್ಕರಣೆ ಮಾಡಬೇಕು. ಅದರಂತೆಯೇ ಪರಿಷ್ಕರಣೆ ಮಾಡಿದ್ದ ಪಠ್ಯದಲ್ಲಿ ಯಾವುದೇ ಚರ್ಚೆ ಇಲ್ಲದೆ ಸರ್ವಾಧಿಕಾರಿ ರೀತಿ ಬದಲಾವಣೆ ಮಾಡಿದ್ದಾರೆ ಎಂದು ಚಿಂತಕ ಹಾಗೂ ಬರಹಗಾರ ರೋಹಿತ್ ಚಕ್ರತೀರ್ಥ ಕಿಡಿಕಾರಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಪಠ್ಯ ಬದಲಾವಣೆಗೆ ನಿಯಮ ಇದೆ. ಒಂದು ಸಮಿತಿ ಇದೆ. ನಾಲ್ಕಾರು ಶಿಕ್ಷಕರ ಕೂರಿಸಿ ಬದಲಾವಣೆ ಅಗತ್ಯವೇ ಎಂದು ಚರ್ಚೆ ಆಗಬೇಕು. ಆದರೆ ಈ ರೀತಿ ಯಾವುದು ಆಗಲಿಲ್ಲ. ಯಾವುದೇ ವೇದಿಕೆ ಅಥವಾ ಸಭೆಗೆ ನನ್ನ ಕರೆದರೆ ನಾನು ಚರ್ಚೆಯಲ್ಲಿ ಭಾಗಿಯಾಗೋಕೆ ಸಿದ್ದ ಇದ್ದೇನೆ, ಆದರೆ ಇವರು ಯಾರೊಂದಿಗೂ ಚರ್ಚೆ ಮಾಡದೆ ಸರ್ವಾಧಿಕಾರಿ ರೀತಿ ಬದಲಾವಣೆ ಮಾಡಿದ್ದಾರೆ. ಇದನ್ನು ನಾನು ತಾತ್ವಿಕವಾಗಿ ವಿರೋಧ ಮಾಡುತ್ತೇನೆ ಎಂದರು.
ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಮಾಡಿದ್ದೆವು. ಕರ್ನಾಟಕ ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷನಾಗಿ ಕೆಲಸ ಮಾಡಿದ್ದೆ. ನನ್ನ ನೇತೃತ್ವದಲ್ಲಿ ಸಮಿತಿ ಸದಸ್ಯರು ಸೇರಿ ಪಠ್ಯ ಪರಿಷ್ಕರಣೆ ಮಾಡಿದ್ದೆವು. ನಮ್ಮಲ್ಲಿ ತಪ್ಪಾಗಿದ್ದರೆ ಅದರಲ್ಲಿ ಇದ್ದ ಆಕ್ಷೇಪ ಹೇಳಬೇಕಿತ್ತು. ಇವರು ಸಾವರ್ಕರ್ ಪಾಠ ತೆಗೆದಿದ್ದಾರೆ. ಮಕ್ಕಳಿಗೆ ಇದು ಇಷ್ಟವಾದ ಪಾಠ ಆಗಿತ್ತು. ಇದನ್ನು ಯಾವ ಕಾರಣಕ್ಕೆ ತೆಗೆದಿದ್ದಾರೆ ಎಂದೇ ಗೊತ್ತಾಗುತ್ತಿಲ್ಲ, ಭಗತ್ ಸಿಂಗ್ ಪಾಠ ತೆಗೆದು ಹಾಕಿದ್ದು, ರಾಷ್ಟ್ರಪ್ರೇಮಿಗಳ ವಿರುದ್ಧ ಇದ್ದೇವೆ ಎನ್ನೋದನ್ನ ತೋರಿಸಿದ್ದಾರೆ ಎಂದು ಹರಿಹಾಯ್ದರು.
ಮಕ್ಕಳ ಬೌದ್ದಿಕತೆಗೆ ಪರವಾಗಿ ಪಾಠ ಇತ್ತು ಆದರೆ ಅದನ್ನು ತೆಗೆದಿದ್ದಾರೆ. ಮಕ್ಕಳ ಭವಿಷ್ಯಕ್ಕಿಂತ ಇವರು ಒಂದು ಪಕ್ಷದ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಅಷ್ಟೇ. ಪಠ್ಯ ಪರಿಷ್ಕರಣೆ ಈ ಹಿಂದೆ ನಾವು ಸಮಿತಿ ರಚನೆ ಮಾಡಿ ಚರ್ಚೆ ಮಾಡಿ ತೆಗೆದುಕೊಂಡ ನಿರ್ಧಾರವಾಗಿತ್ತು. ಆದರೆ ಈಗ ಇವರು ಕೆಲ ಪಾಠ ಬಿಡುವ ಮೂಲಕ ಯಾವ ಸಂದೇಶ ನೀಡ್ತಾ ಇದ್ದಾರೆ ಗೊತ್ತಾಗ್ತಾ ಇಲ್ಲ. ಒಂದು ರೀತಿ ಗೊಂದಲ ಮಾಡ್ತಾ ಇದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.