ಬೆಂಗಳೂರು : ನಗರದಲ್ಲಿ ರೆಮ್ಡಿಸಿವರ್ ಹಾಗೂ ಆ್ಯಕ್ಸಿಜೆನ್ ಕೊರತೆ ತೀವ್ರವಾಗಿದೆ. ಸರ್ಕಾರ 100 ರೆಮ್ಡಿಸಿವರ್ ಕೇಳಿದರೆ ಕೇವಲ 25 ಮಾತ್ರ ಪೂರೈಸುತ್ತಿದೆ. ಹೀಗಾಗಿ, ಗಂಭೀರ ಸಮಸ್ಯೆ ಇದ್ದವರಿಗಷ್ಟೇ ಅದನ್ನು ನೀಡಲಾಗುತ್ತಿದೆ ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳ ಸಂಘ ಹೈಕೋರ್ಟ್ಗೆ ಮಾಹಿತಿ ನೀಡಿದೆ.
ಕೋವಿಡ್ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ವಿವಿಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.
ಈ ವೇಳೆ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಗಳ ಸಂಘ(ಫನಾ)ದ ಅಧ್ಯಕ್ಷ ಡಾ. ಹೆಚ್ ಎಂ ಪ್ರಸನ್ನ ಮಾಹಿತಿ ನೀಡಿ, ಸರ್ಕಾರ ನಮಗೆ ಸೂಕ್ತ ಪ್ರಮಾಣದಲ್ಲಿ ಆ್ಯಕ್ಸಿಜನ್ ಹಾಗೂ ರೆಮ್ಡಿಸಿವರ್ ಪೂರೈಸುತ್ತಿಲ್ಲ. 100 ರೆಮ್ಡಿಸಿವರ್ ಕೇಳಿದರೆ ಕೇವಲ 25 ಮಾತ್ರ ಪೂರೈಸುತ್ತಿದೆ.
ಆಕ್ಸಿಜನ್ ಬೇಡಿಕೆಯ ಶೇಕಡಾ 50ರಷ್ಟನ್ನೇ ಪೂರೈಸುತ್ತಿದೆ. ಸರ್ಕಾರದ ಬಳಿ ಸ್ಟಾಕ್ ಇದ್ದರೂ ಪೂರೈಸುತ್ತಿಲ್ಲ. ಹೀಗಾಗಿ, ಖಾಸಗಿ ಪೂರೈಕೆದಾರರಿಂದ ಆಕ್ಸಿಜನ್ ಖರೀದಿಸಲಾಗುತ್ತಿದೆ. ಇದರಿಂದಾಗಿ ಬೆಲೆಯೂ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ರಾಜ್ಯದಲ್ಲಿ ಆಕ್ಸಿಜನ್, ರೆಮ್ಡಿಸಿವರ್ ಕೊರತೆ ಹೆಚ್ಚಾಗಿದೆ. ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಅಭಿಪ್ರಾಯಪಟ್ಟಿತಲ್ಲದೇ, ಸರ್ಕಾರ ಅಗತ್ಯ ಪ್ರಮಾಣದಲ್ಲಿ ರೆಮ್ಡಿಸಿವಿರ್ ಹಾಗೂ ಆಕ್ಸಿಜನ್ ಪೂರೈಸಬೇಕು.