ಬೆಂಗಳೂರು: ಆನ್‍ಲೈನ್ ಶಿಕ್ಷಣ ನಿರ್ವಹಣೆಗೆ ಸಂಬಂಧಿಸಿದಂತೆ ಪೋಷಕರ, ಸಾರ್ವಜನಿಕರ ಯಾವುದೇ ದೂರುಗಳಿದ್ದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ವಾಣಿಯ ಸಾರ್ವಜನಿಕ ಸಹಾಯವಾಣಿಗೆ ಕರೆ ಮಾಡುವ ಮೂಲಕ ದಾಖಲಿಸಬಹುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸಮಗ್ರ ಶಿಕ್ಷಣ ಇಲಾಖೆ ಕಚೇರಿಯಲ್ಲಿ ಆನ್‍ಲೈನ್ ಶಿಕ್ಷಣ ಕುರಿತಂತೆ ಹೊರಡಿಸಲಾದ ಸೂಚನೆಗಳನ್ವಯ ಸೂಕ್ತ ಅನುಪಾಲನಾ ವ್ಯವಸ್ಥೆ ಜಾರಿಯಲ್ಲಿಡುವ ಕುರಿತು ಮತ್ತು ಈ ಸುತ್ತೋಲೆಗಳ ಅನುಷ್ಠಾನದಲ್ಲಿ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಸಾರ್ವಜನಿಕರು ಆನ್‍ಲೈನ್ ಶಿಕ್ಷಣದ ಕುರಿತ ದೂರುಗಳನ್ನು ಶಿಕ್ಷಣ ವಾಣಿಯ ಸಹಾಯವಾಣಿ 18004257302 ಇಲ್ಲವೇ ವಾಟ್ಸ್ಆ್ಯಪ್ ಸಂಖ್ಯೆ 9483045130 ಮೂಲಕ ದೂರು ದಾಖಲಿಸಬಹುದಾಗಿದೆ. ದೂರುಗಳನ್ನು ನಿರ್ವಹಿಸಲು ಕೂಡಲೇ ಆಯುಕ್ತರ ಕಚೇರಿ ಮತ್ತು ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರ ಹಂತದಲ್ಲಿ ಒಬ್ಬೊಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಬೆಂಗಳೂರು, ಕಲಬುರಗಿ, ಬೆಳಗಾವಿ, ಮಂಗಳೂರು, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಹಲವು ನಗರ ಕೇಂದ್ರಿತ ಪ್ರದೇಶಗಳಲ್ಲಿ ಇಂತಹ ದೂರುಗಳು ಹೆಚ್ಚಾಗಿರುವುದರಿಂದ ಅಧಿಕಾರಿಗಳು ಆನ್‍ಲೈನ್ ಶಿಕ್ಷಣದಲ್ಲಿನ ಸಮಸ್ಯೆಗಳನ್ನು ಮತ್ತು ದೂರುಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಶನಿವಾರ ನಗರಗಳ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಬೇಕೆಂದು ಇಲಾಖೆಯ ಆಯುಕ್ತರಿಗೆ ಸಚಿವರು ಸೂಚಿಸಿದರು.
ಯಾವುದೇ ಶಾಲೆಗಳಿರಲಿ ಆನ್‍ಲೈನ್ ಶಿಕ್ಷಣವನ್ನು ತಜ್ಞರ ಸಮಿತಿ ಶಿಫಾರಸಿನನ್ವಯ ಇಲಾಖೆ ಹೊರಡಿಸಿರುವ ಸುತ್ತೋಲೆಗಳನ್ವಯ ವೈಜ್ಞಾನಿಕವಾಗಿಯೇ ನಿರ್ವಹಿಸುವ ಕುರಿತು ಅಗತ್ಯ ಅನುಪಾಲನಾ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಬೇಕು. ಬಿಇಒಗಳು ಆನ್‍ಲೈನ್ ತರಗತಿಗಳ ಪರಾಮರ್ಶೆ ಮಾಡುವುದರೊಂದಿಗೆ ಕೇಂದ್ರ ಕಚೇರಿಯಲ್ಲಿ ಈ ಕುರಿತ ಮಾಹಿತಿ ಯಾವುದೇ ಸಂದರ್ಭದಲ್ಲಿಯೂ ದೊರೆಯವಂತಾಗಬೇಕು ಎಂದು ಸುರೇಶ್ ಕುಮಾರ್ ಸೂಚಿಸಿದರು.