ಬೆಂಗಳೂರು:ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡಿರುವ ವಿದ್ಯಾರ್ಥಿನಿಯೊಬ್ಬಳು 16ನೇ ವಯಸ್ಸಿಗೆ ನಾಲ್ಕನೇ ಕೃತಿ ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿದ್ದಾರೆ.
ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ವಿದ್ಯಾರ್ಥಿನಿ ಅಮನ ಜೆ.ಕುಮಾರ್ ಅವರ ನಾಲ್ಕನೇ ಕೃತಿಯನ್ನು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬಿಡುಗಡೆ ಮಾಡಿ ಬಾಲಕಿಗೆ ಶುಭ ಹಾರೈಸಿದ್ದಾರೆ. ರಾಜ್ಯಪಾಲರ ಸಂದೇಶ, ಇಸ್ರೋ ವಿಜ್ಞಾನಿಗಳ ಮುನ್ನುಡಿ ಈ ಕೃತಿಗೆ ಸಿಕ್ಕಿರುವುದು ಉದಯೋನ್ಮುಖ ಬಾಲ ಕವಯತ್ರಿ ಅಮನ ಜೆ. ಕುಮಾರ್ ಸಾಹಿತ್ಯ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿದೆ.
10ನೇ ವಯಸ್ಸಿಗೆ ಬರುವ ಹೊತ್ತಿಗೆ ಕವನ ಸಂಕಲನ ಬರೆದು ರಾಜ್ಯದ ಸಾಹಿತ್ಯ ಕ್ಷೇತ್ರದ ಗಮನ ಸೆಳೆದಿದ್ದ ವಿದ್ಯಾರ್ಥಿನಿ ಅಮನ ಜೆ.ಕುಮಾರ್ ಇದೀಗ 10ನೇ ತರಗತಿಗೆ ಬರುವಷ್ಟರಲ್ಲಿ ನಾಲ್ಕನೇ ಕೃತಿಯನ್ನು ರಚಿಸಿ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅಮನ ಅವರ ನಾಲ್ಕನೇ ಪುಸ್ತಕ ಗ್ಯಾಲೋರ್ ಆಫ್ ಮಿಸ್ಟರೀಸ್ (Galore of Mysteries) ಅನ್ನು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಬಿಡುಗಡೆಗೊಳಿಸಿದರು.
ಸಂತೋಷ್ ಹೆಗ್ಡೆ ಮೆಚ್ಚುಗೆ:ತಮ್ಮ ಕಚೇರಿಯಲ್ಲಿ ಅಮನ ರಚಿಸಿದ ಗ್ಯಾಲೋರ್ ಆಫ್ ಮಿಸ್ಟರೀಸ್ ಕೃತಿಯನ್ನು ನ್ಯಾ. ಎನ್. ಸಂತೋಷ್ ಹೆಗ್ಡೆ ಅನಾವರಣಗೊಳಿಸಿದರು. ಅಮನ ರಚಿಸಿರುವ ಗ್ಯಾಲೋರ್ ಆಫ್ ಮಿಸ್ಟರೀಸ್ ಬಿಡುಗಡೆಗೊಳಿಸಲು ಬಹಳ ಸಂತಸವಾಯಿತು, ಇದು ಬಹಳ ಸುಂದರ ಕೃತಿಯಾಗಿದೆ. ಓದುಗರು ಈ ಕೃತಿ ಮೆಚ್ಚುತ್ತಾರೆ ಎನ್ನುವ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿ ವಿದ್ಯಾರ್ಥಿನಿ ಅಮನ ಸಾಧನೆಗ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ಯಾಲೋರ್ ಆಫ್ ಮಿಸ್ಟರೀಸ್ ಕೃತಿ: ಇನ್ನು, ಈ ಕೃತಿಯಲ್ಲಿ ರಾಜ್ಯಪಾಲ ಥಾವರ್ ಚಂದ್ರ ಗೆಹ್ಲೋಟ್ ಅವರ ಸಂದೇಶವೂ ಇದೆ. ಇದರ ಜೊತೆ ಈ ಪುಸ್ತಕಕ್ಕೆ ಮುನ್ನುಡಿಯನ್ನು ಇಸ್ರೋ ವಿಜ್ಞಾನಿ ಚಂದ್ರಯಾನ-3 ಪ್ರಾಜೆಕ್ಟ್ ಡೈರೆಕ್ಟರ್ ಡಾ. ಪಿ. ವೀರ ಮುತ್ತುವೇಲ್ ಬರೆದಿದ್ದಾರೆ. ಇದು ಅಮನ ಅವರ 4ನೆಯ ಪುಸ್ತಕ ಹಾಗೂ ಇದು ಮೊದಲ fiction writing ಪುಸ್ತಕವಾಗಿದೆ. ಗ್ಯಾಲೋರ್ ಆಫ್ ಮಿಸ್ಟರೀಸ್("Galore of Mysteries") ಪುಸ್ತಕವು, ಕವನ ಹಾಗೂ ಕಿರು ಕಥೆಗಳಿಂದ ಸಂಗ್ರಹವಾಗಿದ್ದು ರಹಸ್ಯಗಳ ಕೌತುಕವನ್ನು ಒಳಗೊಂಡಿದೆ. ಇದು ಸಾಹಸಮಯವಾಗಿದ್ದು ಭಯಾನಕ ಹಾಗೂ ಹಾಸ್ಯದಿಂದ ಕೂಡಿ ಓದುಗರನ್ನು ಪ್ರತಿಪುಟದಲ್ಲಿಯೂ ಕಲ್ಪನಾ ಲೋಕಕ್ಕೆ ಕರೆದೊಯ್ಯುವ ಆಕರ್ಷಣೆಯನ್ನು ಹೊಂದಿದೆ.