ಬೆಂಗಳೂರು: ಕೊರೊನಾ ಭೀತಿಯಿಂದ ರಾಜ್ಯದ ಜೈಲುಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಹೊಸದಾಗ ಜೈಲಿಗೆ ಬರುವ ಕೈದಿಗಳನ್ನು ಮೊದಲು 21 ದಿನ ಪ್ರತ್ಯೇಕ ಬ್ಯಾರಕ್ಗಳಲ್ಲಿ ಇರಿಸಲಾಗುತ್ತಿದೆ. ಬಳಿಕ ಕೊರೊನಾ ಪರೀಕ್ಷೆ ನಡೆಸಿ, ಸೋಂಕು ಇಲ್ಲವೆಂದು ದೃಢಪಟ್ಟ ನಂತರ ಜೈಲಿನೊಳಗಡೆ ಕಳುಹಿಸಲಾಗುತ್ತಿದೆ.
ಕೊರೊನಾ ಬಂದ ನಂತರ ಜೈಲಲ್ಲಿರುವ ಕೈದಿಗಳಿಗೆ ಯಾವುದೇ ತೊಂದರೆಯಾಗಬಾರದೆಂದು, ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆ ವಿಧಿಸಬಹುದಾದ ಅಪರಾಧಗಳಲ್ಲಿ ಶಿಕ್ಷೆಗೊಳಪಟ್ಟವರಿಗೆ ತಾತ್ಕಾಲಿಕ ಪೆರೋಲ್ ನೀಡುವಂತೆ ಸರ್ಕಾರ ಸೂಚನೆ ನೀಡಿತ್ತು. ಈ ಹಿನ್ನೆಲೆ ಜೈಲಾಧಿಕಾರಿಗಳು ಒಳ್ಳೆಯ ನಡತೆ ಇರುವ ಕೈದಿಗಳನ್ನು ಮನೆಗೆ ಕಳುಹಿಸಿದ್ದರು. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಒಟ್ಟು 99 ಮಂದಿ ಸೇರಿದಂತೆ, ರಾಜ್ಯದ ಎಲ್ಲಾ ಜೈಲಿನ ಸುಮಾರು 206 ಮಂದಿ ಪೆರೋಲ್ ಪಡೆದ್ದರು.
ಕೊರೊನಾ ಇರುವ ಕಾರಣ ಜೈಲಿನಲ್ಲಿರುವವರಿಗೆ, ಕುಟುಂಬಸ್ಥರನ್ನು ಭೇಟಿಯಾಗಲು ಅನುಮತಿ ಇಲ್ಲ. ಹಾಗೆ ಹೊರಗಡೆಯಿಂದ ಯಾವುದೇ ಆಹಾರಗಳನ್ನ ಕೂಡ ತಂದು ನೀಡುವಂತಿಲ್ಲ. ಹೀಗಾಗಿ ಕಳೆದ ಐದಾರು ತಿಂಗಳಿನಿಂದ ಜೈಲಿನ ನಾಲ್ಕು ಗೋಡೆಯ ಮಧ್ಯೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಚಾರಣಾಧೀನ ಕೈದಿಗಳ ವಿಚಾರಣೆ ಅಗತ್ಯತೆ ಇದ್ದರೆ, ಸಂಬಂಧಿಸಿದ ತನಿಖಾಧಿಕಾರಿ ಬಾಡಿ ವಾರೆಂಟ್ ಮೂಲಕ ಕಸ್ಟಡಿಗೆ ಪಡೆಯಬಹುದಾಗಿದೆ.