ಬೆಂಗಳೂರು:ಮೈತ್ರಿ ಸರ್ಕಾರದ ಅವಧಿಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಘೋಷಿಸಿದ್ದ ವಿಶೇಷ ಅನುದಾನದ ಮೊದಲ ಕಂತಿನ ಹಣವನ್ನು ಇಂದು ಸರ್ಕಾರ ಬಿಡುಗಡೆ ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈತ್ರಿ ಸರ್ಕಾರದ ವೇಳೆ ಚನ್ನಪಟ್ಟಣಕ್ಕೆ ಘೋಷಿಸಿದ್ದ ಯೋಜನೆಗಳ ಅನುದಾನ ಬಿಡುಗಡೆ; ಹೆಚ್ಡಿಕೆ - ಮೈತ್ರಿ ಸರ್ಕಾರದ ವೇಳೆ ಚನ್ನಪಟ್ಟಣಕ್ಕೆ ಘೋಷಿಸಿದ್ದ ಯೋಜನೆಗಳ ಅನುದಾನ ಬಿಡುಗಡೆ; ಹೆಚ್ಡಿಕೆ
ನಮ್ಮ ಮೈತ್ರಿ ಸರ್ಕಾರ ಚನ್ನಪಟ್ಟಣದ ಯೋಜನೆಗೆ ಘೋಷಿಸಿದ್ದ ಅನುದಾನದ ಪೈಕಿ ಮೊದಲ ಕಂತಿನ 54 ಕೋಟಿ ರೂಪಾಯಿಗಳ ಹಣವನ್ನು ರಾಜ್ಯ ಸರ್ಕಾರ ಇದೀಗ ಬಿಡುಗಡೆ ಮಾಡಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ರಸ್ತೆ ಹಾಗೂ ಸೇತುವೆ ಕಾಮಗಾರಿಗಳಿಗೆ 104 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಹಿಂದಿನ ತಮ್ಮ ಸರ್ಕಾರದ ವೇಳೆ ಘೋಷಣೆ ಮಾಡಲಾಗಿತ್ತು. ಈ ಪೈಕಿ ಮೊದಲ ಕಂತಿನ 54 ಕೋಟಿ ರೂಪಾಯಿಗಳ ಹಣವನ್ನು ರಾಜ್ಯ ಸರ್ಕಾರ ಇದೀಗ ಬಿಡುಗಡೆ ಮಾಡಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಬಾಕಿ ಇರುವ 50 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಪ್ರಸಕ್ತ ಹಣಕಾಸು ವರ್ಷದ ಮಾರ್ಚ್ ಅಂತ್ಯದೊಳಗೆ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಪ್ರಸಕ್ತ ಮಂಜೂರಾಗಿರುವ 54 ಕೋಟಿ ರೂಪಾಯಿಗಳ ಕಾಮಗಾರಿಯ ಜೊತೆಗೆ ಉಳಿದ ರಸ್ತೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಇದರಿಂದಾಗಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 104 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷಾಂತ್ಯದೊಳಗೆ ಪೂರ್ಣಗೊಳಿಸಬಹುದು ಎಂದು ಮಾಹಿತಿ ನೀಡಿದ್ದಾರೆ.