ಬೆಂಗಳೂರು: ಪಂಚರತ್ನ ರಥಯಾತ್ರೆಯ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ 2ನೇ ಆಭ್ಯರ್ಥಿ ಪಟ್ಟಿಯನ್ನು ಬಿಡುಗಡೆ ಮಾಡಲು ಧಳಪತಿಗಳು ನಿರ್ಧರಿಸಿದ್ದಾರೆ.
ಮಾರ್ಚ್ 26 ರಂದು ಮೈಸೂರಿನಲ್ಲಿ ನಡೆಯಲಿರುವ ಪಂಚರತ್ನ ರಥಯಾತ್ರೆಯ ಸಮಾರೋಪದಲ್ಲಿ ಎರಡನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸುಮಾರು 50 ರಿಂದ 60 ಮಂದಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡುತ್ತೇವೆ. ನಾನು ಬೇರೆ ಪಕ್ಷಗಳಂತೆ ಕಾಯುವ ತಂತ್ರಗಾರಿಕೆ ಮಾಡುವುದಿಲ್ಲ. ಸಮರ್ಥ ಅಭ್ಯರ್ಥಿ ನಮ್ಮ ಬಳಿ ಇದ್ದಾರೆ. ಈಗಾಗಲೇ 123 ಅಭ್ಯರ್ಥಿಗಳು ಅಂತಿಮಗೊಳಿಸಲಾಗಿದೆ. 10 ರಿಂದ 15 ಕ್ಷೇತ್ರಗಳಲ್ಲಿ ನಮಗೆ ಶಕ್ತಿ ಕೊರತೆ ಇರಬಹುದು ಅಷ್ಟೇ ಎಂದು ಹೇಳಿದರು. ಮೈಸೂರಿನಲ್ಲಿ ಮಾರ್ಚ್ 26 ರಂದು ಪಂಚರತ್ನ ರಥಯಾತ್ರೆ ಸಮಾರೋಪ ಕಾರ್ಯಕ್ರಮವಿದೆ. ಕಾರ್ಯಕ್ರಮದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ ಎಂದರು.
ನಮ್ಮ ಪಕ್ಷದಿಂದ ಹೋಗುವವರು ಹೋಗಿ ಆಗಿದೆ: ಎಲ್ಲರೂ ವಿಧಾನಸಭೆ ಚುನಾವಣೆ ಗುಂಗಿನಲ್ಲಿ ಇದ್ದಾರೆ. 45 ದಿನಗಳಲ್ಲಿ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷದಲ್ಲೂ ಅದರ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ಪಕ್ಷ ಕೂಡಾ ಚುನಾವಣೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಹೇಳಿದರು. ಬಿಜೆಪಿ-ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್‌ಗೆ ಸೇರ್ಪಡೆ ಆಗುವವರು ಇದ್ದಾರೆ. ಎರಡೂ ಪಕ್ಷದಲ್ಲಿ ಟಿಕೆಟ್ ಘೋಷಣೆಯಾಗಲೆಂದು ಕಾಯುತ್ತಿದ್ದಾರೆ. ನಮ್ಮ ಪಕ್ಷದಿಂದ ಹೋಗುವವರು ಹೋಗಿ ಆಗಿದೆ. ಬೇರೆ ಯಾರೂ ಹೋಗುವುದಿಲ್ಲ. ಎರಡು ಪಕ್ಷಗಳು ಟಿಕೆಟ್ ಘೋಷಣೆ ಮಾಡಿದ ನಂತರ ಎಲ್ಲಾ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಹೇಳಿದರು.