ಬೆಂಗಳೂರು : ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮನೆ, ಕಟ್ಟಡಗಳನ್ನು ನಿರ್ಮಿಸಲು ಇದ್ದ ನಿರ್ಬಂಧವನ್ನು ಸರ್ಕಾರ ಸಡಿಲಿಸಲಿದೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಬುಧವಾರ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಇದುವರೆಗೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಮನೆ ಮತ್ತು ಕಟ್ಟಡಗಳನ್ನು ನಿರ್ಮಿಸಲು ಅನುಮತಿ ಇರಲಿಲ್ಲ. ಆದರೆ ಸದರಿ ಪ್ರದೇಶದಲ್ಲಿ ಖಾಸಗಿ ಭೂಮಿ ಇದ್ದರೆ ಅಂಥ ಪ್ರದೇಶದಲ್ಲಿ ಫಾರಂ ಹೌಸ್, ರೆಸಾರ್ಟ್, ಸಾಮಿಲ್, ಪವನ ವಿದ್ಯುತ್ ಘಟಕಗಳನ್ನು ಸ್ಥಾಪಿಸಲು ಅನುಮತಿ ದೊರೆಯಲಿದೆ. ಈ ಮುಂಚೆ ಪವನ ವಿದ್ಯುತ್ ಘಟಕಗಳನ್ನು ಸ್ಥಾಪಿಸಿದರೆ ಹಕ್ಕಿಗಳ ಬದುಕಿಗೆ ತೊಂದರೆಯಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಹಕ್ಕಿಗಳು ಉದ್ದೇಶಪೂರ್ವಕವಾಗಿ ಪವನ ವಿದ್ಯುತ್ ಘಟಕಗಳಿಗೆ ಬಂದು ಸಾಯುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಅವುಗಳಿಗೂ ಅನುಮತಿ ನೀಡಲು ಇಂದಿನ ಸಂಪುಟ ಉಪಸಮಿತಿ ಸಹಮತ ವ್ಯಕ್ತಪಡಿಸಿದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ರಾಜ್ಯದಲ್ಲಿ ಸುಮಾರು 35 ಪ್ರದೇಶಗಳನ್ನು ಗುರುತಿಸಲಾಗಿದ್ದು, ಈ ಪೈಕಿ 29 ಪ್ರದೇಶಗಳಲ್ಲಿ ಇಂತಹ ಚಟುವಟಿಕೆಗಳಿಗೆ ಅನುಮತಿ ಕೊಡಲು ಸಹಮತ ವ್ಯಕ್ತವಾಗಿತ್ತು. ನಾಗರಹೊಳೆ ಸೇರಿದಂತೆ ಇನ್ನೂ ಆರು ಅರಣ್ಯ ಪ್ರದೇಶಗಳಲ್ಲಿ ಈ ನಿಯಮವನ್ನು ಸಡಿಲಿಸುವ ಕುರಿತು ಇಂದು ಸಹಮತ ವ್ಯಕ್ತವಾಗಿದೆ ಎಂದು ಸಚಿವರು ಹೇಳಿದರು.
ಶರಾವತಿ ಯೋಜನೆಯಿಂದ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಭೂಮಿ ನೀಡುವ ಸಂಬಂಧ ಇದ್ದ ಸಮಸ್ಯೆಯನ್ನು ಪರಿಹರಿಸಲು ಸುಪ್ರೀಂ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಮಧು ಬಂಗಾರಪ್ಪ ಉತ್ತರಿಸಿದರು. ಮಲೆನಾಡು ಭಾಗದ ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡುವ ಸಂಬಂಧ ಆಗಿರುವ ಗೊಂದಲವನ್ನು ಪರಿಹರಿಸಲು ನಮ್ಮ ಸರ್ಕಾರ ಸಜ್ಜಾಗಿದೆ. ರೈತರಿಗೆ ಸಾಗುವಳಿ ಹಕ್ಕು ಪತ್ರ ನೀಡಲು 75 ವರ್ಷಗಳ ಅನುಭೋಗದ ದಾಖಲೆ ನೀಡಬೇಕು ಎಂದು ಈ ಹಿಂದೆ ಕರಾರು ವಿಧಿಸಲಾಗಿತ್ತು. ಆದರೆ ಈ ಷರತ್ತನ್ನು ಪೂರೈಸುವುದು ಕಷ್ಟ. ಹೀಗಾಗಿ ಈ ವಿಷಯದಲ್ಲಿರುವ ಗೊಂದಲವನ್ನು ಪರಿಹರಿಸಲು ಸೂಕ್ತ ಕಾನೂನುಗಳನ್ನು ಜಾರಿಗೆ ತರಲು ತಮ್ಮ ಸರ್ಕಾರ ಬದ್ಧ ಎಂದರು.
ಇದನ್ನೂ ಓದಿ :ಅನುದಾಕ್ಕಾಗಿ ಕಾಲಿಗೆ ಬಿದ್ದು ಮನವಿ ಪತ್ರ ನೀಡಿದ ಮುನಿರತ್ನ; ಸೀನ್ ಕ್ರಿಯೆಟ್ ಮಾಡುವ ಅಗತ್ಯವಿರಲಿಲ್ಲ ಎಂದ ಡಿ.ಕೆ.ಶಿವಕುಮಾರ್