ಬೆಂಗಳೂರು : ಯುವತಿಯನ್ನು ಅಪಹರಿಸಲು ಯತ್ನಿಸಿದ ಆರೋಪಿಗಳನ್ನು ಕೆಐಎಸ್ಐಎಫ್ ಹಾಗೂ ಸಿಆರ್ಪಿಎಫ್ ಪೊಲೀಸರ ತಂಡ ವಶಕ್ಕೆ ಪಡೆದಿದೆ. ಈ ಘಟನೆ ವಿಧಾನಸೌಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ಏಳು ಗಂಟೆಯ ಸುಮಾರಿಗೆ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಬುಧವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಆರೋಪಿಗಳು ವಿಧಾನಸೌದ ಮೆಟ್ರೋ ನಿಲ್ದಾಣದ ಬಳಿ ಆಕೆಯನ್ನು ಏಕಾಏಕಿ ಎಳೆದು ತಮ್ಮ ಕಾರಿನಲ್ಲಿ ಕೂರಿಸಿಕೊಂಡಿದ್ದಾರೆ. ಆಗ ಸ್ಥಳದಲ್ಲಿದ್ದ ಸಿಆರ್ಪಿಎಫ್ ತಂಡ ಅಲರ್ಟ್ ಆಗಿದ್ದು ತಕ್ಷಣ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಸಂಬಂಧಿಕರಿಂದಲೇ ನಡೆದ ಅಪಹರಣ:ಕಳೆದ ಕೆಲವು ತಿಂಗಳ ಹಿಂದೆ ಯುವತಿಯ ತಂದೆ ನಿಧನ ಹೊಂದಿದ್ದರು. ಅವರು ಮಾಡುತ್ತಿದ್ದ ಎಫ್‌ಡಿಎ ಕೆಲಸ ಮಗಳಿಗೆ ದೊರೆತಿತ್ತು. ಇದೇ ವಿಚಾರ ಯುವತಿಯ ತಂದೆಯ ಎರಡನೇ ಪತ್ನಿಯ ಕಿರಿಯ ಸಹೋದರನ ಸಿಟ್ಟಿಗೆ ಗುರಿಯಾಗಿತ್ತು. ಎಫ್‌ಡಿಎ ಕೆಲಸ ತನ್ನ ಸಹೋದರಿಗೆ ಸಿಗಬೇಕಿತ್ತು ಎಂದು ಕ್ಯಾತೆ ತೆಗೆದಿದ್ದರು. ಅಲ್ಲದೇ ಆ ಯುವತಿಯನ್ನು ಆರೋಪಿ ಮದುವೆಯಾಗಲು ಇಚ್ಛಿಸಿದ್ದನಂತೆ. ಆದರೆ ಯುವತಿಗೆ ಆತನನ್ನು ಮದುವೆಯಾಗಲು ಇಷ್ಟವಿರಲಿಲ್ಲ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಹೀಗಾಗಿ ವಿಧಾನಸೌದ ಮೆಟ್ರೋ ಸ್ಟೇಷನ್ ಬಳಿ ಯುವತಿಯನ್ನು ಅಪಹರಿಸಲು ಆರೋಪಿ ಯತ್ನಿಸಿದ್ದಾನೆ. ಆಗ ಸ್ಥಳದಲ್ಲೇ ಇದ್ದ ಸಿಆರ್ಪಿಎಫ್ ಹಾಗೂ ಕೆಎಸ್ಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದಿದ್ದು, ವಿಧಾನಸೌಧ ಠಾಣಾ ಪೊಲೀಸರಿಗೆ ಒಪ್ಪಿಸಿದರು. ಈ ಘಟನೆ ಕುರಿತಂತೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.