ಬೆಂಗಳೂರು : ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣ ತನಿಖೆ ಚುರುಕುಗೊಳಿಸಿರುವ ಕಾಟನ್ ಪೇಟೆ ಪೊಲೀಸರು ಮೃತಳ ನಾದಿನಿ ಹಾಗೂ ಆಕೆಯ ಮಗನನ್ನು ಬಂಧಿಸಿದ್ದಾರೆ. ಮೃತಳ ನಾದಿನಿ ಮಾಲಾ ಹಾಗೂ ಈಕೆಯ ಮಗ ಅರುಣ್ನನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದ್ದರು
ಕೊಲೆ ಹಿಂದೆ ಇವರ ಕೈವಾಡವಿರುವುದು ಮೇಲ್ನೊಟಕ್ಕೆ ಕಂಡು ಬಂದಿದೆ. ಹಣಕಾಸು ವೈಷಮ್ಯ ಹಾಗೂ ರಾಜಕೀಯ ಕಾರಣಕ್ಕಾಗಿ ರೇಖಾಳನ್ನು ಕೊಲೆ ಮಾಡಿಸಿರುವ ಬಗ್ಗೆ ಗುಮಾನಿಯಿದೆ. ಶಂಕಿತರು ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸರು ಸಾಕ್ಷ್ಯಾಧಾರ ಸಂಗ್ರಹಿಸುವ ಕಾಯಕದಲ್ಲಿ ತೊಡಗಿದ್ದು, ಇಂದು ಅವರನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೊಂದೆಡೆ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ಳನ್ನು ಬರ್ಬರವಾಗಿ ಹತ್ಯೆ ಮಾಡಿದ ಬಳಿಕ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದ್ದು, ಇದರಲ್ಲಿ ಮರ್ಡರ್ ಮಾಸ್ಟರ್ ಮೈಂಡ್ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಬ್ಬರ ವಿಚಾರಣೆ ಬಳಿಕ ಮಾಸ್ಟರ್ ಮೈಂಡ್ ವಿಚಾರ ಬಹಿರಂಗ!
ರೇಖಾ ಕದಿರೇಶ್ರನ್ನು ಬಿಜೆಪಿ ಕಚೇರಿ ಬಳಿ ಕುತ್ತಿಗೆ ಮತ್ತು ಎದೆಯ ಭಾಗಕ್ಕೆ 10ಕ್ಕೂ ಹೆಚ್ಚು ಸಲ ಇರಿದು ಕೊಂದಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಗಳಾಗಿ ಪೀಟರ್ ಮತ್ತು ಸೂರ್ಯ ಎಂಬುವರನ್ನು ಬಂಧಿಸಲಾಗಿತ್ತು. ಈ ಇಬ್ಬರನ್ನು ಬಂಧಿಸಲು ತೆರಳಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಕಾಲಿಗೆ ಗುಂಡು ಹೊಡೆದಿದ್ದರು. ಹೀಗಾಗಿ, ಇಬ್ಬರು ಆರೋಪಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ.
ಇದರಿಂದ ಪೀಟರ್ ಮತ್ತು ಸೂರ್ಯ ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ಈ ಇಬ್ಬರು ಆರೋಪಿಗಳ ತನಿಖೆಯ ಬಳಿಕವೇ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್ ಯಾರು ಎಂಬುವುದು ಬಹಿರಂಗವಾಗಲಿದೆ. ಸದ್ಯ ಕಾಟನ್ ಪೇಟೆ ಪೊಲೀಸರು ಮಾಲಾ ಸೇರಿದಂತೆ 7 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದವರನ್ನು ಸಾಕ್ಷಿಯನ್ನಾಗಿಸುವ ಸಾಧ್ಯತೆಗಳಿದ್ದು, ತನಿಖೆ ಮುಂದುವರೆಸಿದ್ದಾರೆ.