ಬೆಂಗಳೂರು: ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡುವ ಕುರಿತಂತೆ ಬೆಸ್ಕಾಂ ಕಟ್ಟು ನಿಟ್ಟಿನ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಬೆಂಗಳೂರು ನಗರ ಪೊಲೀಸ್ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಳೆದ ಗುರುವಾರ ನಗರದಲ್ಲಿ ಜಂಟಿಯಾಗಿ ಆಯೋಜಿಸಿದ್ದ ಗಣೇಶೋತ್ಸವ ಸಾರ್ವಜನಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮತ್ತು ನಿರ್ದೇಶಕ ತಾಂತ್ರಿಕ ಡಿ.ನಾಗಾರ್ಜುನ ಭಾಗವಹಿಸಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನೀಡುವ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ರೂಪಿಸಿರುವ ನಿಯಾಮವಳಿಗಳನ್ನು ಬೆಸ್ಕಾಂ ನಿರ್ದೇಶಕರು (ತಾಂತ್ರಿಕ) ಸಭೆಯ ಗಮನಕ್ಕೆ ತಂದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮಾತನಾಡಿ, ಗಣೇಶೋತ್ಸವ ಸಮಾರಂಭದ ಆಯೋಜಕರು ಅಥವಾ ಸಂಘಟಕರು ಸಂಬಂಧಪಟ್ಟ ಬೃಹತ್ ಬೆಂಗಳೂರು ಮಹಾನಗರ ವ್ಯಪ್ತಿಯಿಂದ ನಿರಾಕ್ಷೇಪಣಾಪತ್ರವನ್ನು ಪಡೆದು ಬೆಸ್ಕಾಂನ ಸಂಬಂಧಪಟ್ಟ ಉಪ ವಿಭಾಗದಲ್ಲಿ ಸಲ್ಲಿಸಲು, ಸಂಬಂಧಪಟ್ಟ ಉಪವಿಭಾಗದಲ್ಲಿ ನೀಡಲಾದ ವಿದ್ಯುತ್ ಮಂಜೂರಾತಿ ಪತ್ರದ ಅನುಸಾರ ಅಗತ್ಯ ಶುಲ್ಕವನ್ನು ಬೆಸ್ಕಾಂಗೆ ಪಾವತಿಸಲು ಆಯೋಜಕರಿಗೆ ತಿಳಿಸಲಾಗಿದೆ ಎಂದರು.
ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ಬೆಸ್ಕಾಂ ಕ್ಷೇತ್ರಾಧಿಕಾರಿಗಳಿಂದ ಪರಿಶೀಲನೆ:ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಮುನ್ನ ಬೆಸ್ಕಾಂ ಕ್ಷೇತ್ರಾಧಿಕಾರಿಗಳಿಗೆ ಸಮಾರಂಭದ ಸ್ಥಳ ಪರಿಶೀಲನೆ ಮತ್ತು ತಪಾಸಣೆ ಮಾಡಲು ವ್ಯವಸ್ಥೆ ಕಲ್ಪಿಸಬೇಕು. ಭೂಗತ ಕೇಬಲ್ ಅನ್ನು ಉಪಯೋಗಿಸಿಕೊಂಡು ಓವರ್ ಹೆಡ್ ಮಾರ್ಗದಲ್ಲಿ ಎಳೆದು ವಿದ್ಯುತ್ ಸಂಪರ್ಕ ಪಡೆಯಲು ಸಂಘಟಕರಿಗೆ ತಿಳಿಸಲಾಗಿದೆ.
ಅಲ್ಲದೆ ಒವರ್ ಹೆಡ್ ಮಾರ್ಗದ ಸುರಕ್ಷತೆಯ ಹಿತದೃಷ್ಟಿಯಿಂದ ಯಾವುದೇ ರೀತಿಯ ಜಾಯಿಂಟ್ ಇಲ್ಲದೇ, ವಿದ್ಯುತ್ ಸೋರಿಕೆಯಾಗದೇ ಇರುವುದನ್ನು ಸಂಘಟಕರು ಖಚಿತ ಪಡಿಸಿಕೊಳ್ಳಬೇಕು. ವಿದ್ಯುತ್ ಸಂಪರ್ಕ ಪಡೆಯುವ ಸಂದರ್ಭದಲ್ಲಿ ನೋಂದಾಯಿತ ವಿದ್ಯುತ್ ಗುತ್ತಿಗೆದಾರರಿಂದ ವೈರಿಂಗ್ ಮತ್ತು ಎಲ್.ಸಿ.ಬಿ ಅಥವಾ ಇ.ಎಲ್.ಸಿ.ಬಿ ಸಾಧನವನ್ನು ಅಳವಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರದ ವಿದ್ಯುತ್ ಪರಿವೀಕ್ಷಕರಿಂದ ಅನುಮತಿ ಪತ್ರ:ಗಣಪತಿ ಪ್ರತಿಷ್ಠಾಪನೆ ಮಾಡುವ ಸ್ಥಳದ ಸುತ್ತ- ಮುತ್ತ ಯಾವುದೇ ಇ.ಹೆಚ್.ಟಿ / ಹೆಚ್.ಟಿ / ಎಲ್.ಟಿ ವಿದ್ಯುತ್ ಮಾರ್ಗಗಳಿಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಉತ್ಸವಗಳು ನಡೆಯುವ ಸಂದರ್ಭದಲ್ಲಿ 100 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನಸಾಂದ್ರತೆ ಸೇರುವ ಸಾಧ್ಯತೆ ಇದ್ದಲ್ಲಿ ಕಡ್ಡಾಯವಾಗಿ ಸಂಬಂಧಪಟ್ಟ ಕರ್ನಾಟಕ ಸರ್ಕಾರದ ವಿದ್ಯುತ್ ಪರಿವೀಕ್ಷಕರಿಂದ ಅನುಮತಿ ಪತ್ರವನ್ನು ಪಡೆದುಕೊಳ್ಳಬೇಕು ಮತ್ತು ಅಗ್ನಿ ಶಾಮಕ ಸಾಧನವನ್ನು ಅಳವಡಿಸಿಕೊಳ್ಳಲು ಸೂಚಿಸಲಾಗಿದೆ ಎಂದರು.