ಬೆಂಗಳೂರು: ನಗರದಲ್ಲಿ ಕೋವಿಡ್ ಲಸಿಕೆ ನೀಡುವುದಕ್ಕೆ ಕೇಂದ್ರಗಳ ಗುರುತು ಕಾರ್ಯ ಅಂತಿಮ ಹಂತ ತಲುಪಿದೆ. ಇದರ ಜೊತೆಗೆ ಲಸಿಕೆ ಪಡೆಯುವ ಫಲಾನುಭವಿಗಳ ಸಂಖ್ಯೆ ಆಧರಿಸಿ ನಗರದಲ್ಲಿ ನಾಲ್ಕು ವಿಭಾಗ ಮಾಡಲು ಪಾಲಿಕೆ ಚಿಂತಿಸಿದೆ. ಇದಕ್ಕಾಗಿ ವಲಯವಾರು ಮ್ಯಾಪಿಂಗ್ ಕಾರ್ಯ ಮಾಡಲಾಗುತ್ತಿದೆ.
100 ರಿಂದ 500, 500 ರಿಂದ 1000 ಹಾಗೂ ಸಾವಿರ ಮೇಲ್ಪಟ್ಟವರು ಎಂದು ನಾಲ್ಕು ವಿಭಾಗಗಳನ್ನಾಗಿ ಮಾಡಿ ಮ್ಯಾಪಿಂಗ್ ಮಾಡಿಕೊಳ್ಳಲಾಗುತ್ತಿದೆ. ಲಸಿಕಾ ಕೇಂದ್ರ ಒಂದರಲ್ಲಿ ನೂರು ಜನರಿಗೆ ಮಾತ್ರ ಲಸಿಕೆ ನೀಡಬೇಕು ಎಂದು ಕೇಂದ್ರ ಸರ್ಕಾರದ ನಿರ್ದೇಶನ ಇದ್ದು, ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಲಸಿಕಾ ಕೇಂದ್ರ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಲಸಿಕೆ ನೀಡುವುದಕ್ಕೆ ಬೇಕಾದ ವ್ಯವಸ್ಥೆ ಇರುವುದರಿಂದ ಒಂದು ಮೆಡಿಕಲ್ ಕಾಲೇಜಿನಲ್ಲಿ ಎರಡು ಅಥವಾ ಮೂರು ಕೋವಿಡ್ ಲಸಿಕಾ ಕೇಂದ್ರ ಸ್ಥಾಪಿಸುವ ಬಗ್ಗೆಯೂ ಚರ್ಚೆ ಆಗಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.