ಬೆಂಗಳೂರು: ರೆಡ್ ಮರ್ಕ್ಯೂರಿಗೆ ಬಹಳ ಬೇಡಿಕೆ ಇದೆ ಎಂದು ನಂಬಿಸಿ ಮೋಸ ಮಾಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಬಾಣಸವಾಡಿ ನಿವಾಸಿ ಶ್ರೀಧರ್ ಮೋಸಕ್ಕೆ ಒಳಗಾದವರು. ಆದರೆ ಮೋಸ ಮಾಡಿದವನು ಶ್ರೀಧರ್ ವಿರುದ್ಧವೇ ಪ್ರತಿದೂರು ನೀಡಿದ್ದಾನೆ.
ಶ್ರೀಧರ್ ಬಾಣಸವಾಡಿ ಬಳಿಯ ನಿವಾಸಿಯಾಗಿದ್ದು, ಕಮ್ಮನಹಳ್ಳಿ ಬಳಿ ಮೊಬೈಲ್ ಅಂಗಡಿ ಇಟ್ಟುಕೊಂಡಿದ್ದ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹಳೇ ಟಿವಿ ಮತ್ತು ರೆಡಿಯೋ ಇನ್ನಿತರ ಎಲೆಕ್ಟ್ರಾನಿಕ್ ವಸ್ತುವಿನಲ್ಲಿರುವ ರೆಡ್ ಮರ್ಕ್ಯೂರಿಗೆ ಬೇಡಿಕೆ ಎಂದು ತಿಳಿದಿದ್ದರು. ಹಾಗೆಯೇ ಕೆಲ ದಿನಗಳ ಹಿಂದೆ ಈ ವಿಚಾರ ಕುರಿತು ಸ್ನೇಹಿತನ ಬಳಿಯೂ ಚರ್ಚೆ ಮಾಡಿದ್ದ. ಹೀಗಾಗಿ ಸ್ನೇಹಿತ ಸಾಗರ್ ಎಂಬಾತ ಕರೆ ಮಾಡಿ ಮನೋಜ್ ಸ್ಟಿಪನ್ ಎಂಬಾತನ ಬಳಿ ರೆಡ್ ಮರ್ಕ್ಯೂರಿ ಇದೆ. ಅದು ಕೋಟಿ ರೂಪಾಯಿ ಬೆಲೆ ಬಾಳುತ್ತೆ, ಆದರೆ ಮೊದಲು ಮೂರು ಲಕ್ಷ ಕೊಡಬೇಕೆಂದು ನಂಬಿಸಿದ್ದರು.