ಬೆಂಗಳೂರು:ರಾಜ್ಯ ವಿಧಾನಸಭೆಯ 15ನೇ ಅಧಿವೇಶನದ ಇಂದಿನಿಂದ ಪ್ರಾರಂಭಗೊಂಡಿದ್ದು, ಇಂದಿನ ವಿಧಾನಮಂಡಲ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ರತ್ನಗಂಬಳಿ ಸ್ವಾಗತ ನೀಡಲಾಯಿತು. ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೂಲಕ ವಿಧಾಸಭೆ ಸಭಾಂಗಣಕ್ಕೆ ಆಗಮಿಸಿದ ರಾಜ್ಯಪಾಲರನ್ನು ಸಾಂಪ್ರದಾಯಿಕ ಪೊಲೀಸ್ ಬ್ಯಾಂಡ್‍ನ ಸುಶ್ರಾವ್ಯ ವಾದ್ಯದ ಮೂಲಕ ಬರಮಾಡಿಕೊಳ್ಳಲಾಯಿತು.
ವಿಧಾನಸೌಧ ಆವರಣಕ್ಕೆ ಆಗಮಿಸಿದ ರಾಜ್ಯಪಾಲರನ್ನು ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹಾಗೂ ಉಭಯ ಸದನಗಳ ಕಾರ್ಯದರ್ಶಿ ಅವರು ಸಂಪ್ರದಾಯದಂತೆ ರಾಜ್ಯಪಾಲರನ್ನು ವಿಧಾನಸಭೆ ಸಭಾಂಗಣಕ್ಕೆ ಬರಮಾಡಿಕೊಂಡರು.
ಮೊದಲು ಕನ್ನಡದಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು 34 ಪುಟಗಳ ಭಾಷಣವನ್ನು ಹಿಂದಿ ಭಾಷೆಯಲ್ಲಿ ಮಾಡಿದರು. ಒಂದು ಗಂಟೆಗಳ ಅವಧಿಯಲ್ಲಿ ಭಾಷಣದ ಪುಸ್ತಕವನ್ನು ರಾಜ್ಯಪಾಲರು ಓದಿ ಮುಗಿಸಿದರು. ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ ಬಳಿಕ ಅವರನ್ನು ಸ್ವಾಗತಿಸಿದ ರೀತಿಯಲ್ಲೇ ಕೆಂಪು ಹಾಸಿನ ಮೂಲಕ ಬೀಳ್ಕೊಡಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ತೆರಳುವಾಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯಪಾಲರ ಕೈ ಕುಲುಕಿ ನಮಸ್ಕರಿಸಿದ್ದು ವಿಶೇಷವಾಗಿತ್ತು.