ಬೆಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಹಾಗೂ ರಾಜ್ಯದ ಒಳನಾಡಿನಲ್ಲಿ ಮಾನ್ಸೂನ್ ಚುರುಕಾಗಿದೆ. ಕೊಲ್ಲೂರಿನಲ್ಲಿ 24 ಸೆಂ,ಮೀ, ಅಂಕೋಲ 22 ಸೆಂ.ಮೀ, ಕೊಟ್ಟಿಗೆಹಾರ 22 ಸೆಂ.ಮೀ , ಕದರ 16 ಸೆಂ.ಮೀ, ಶಿರಾ 15 ಸೆಂ.ಮೀ, ಕಾರ್ಕಳ 14 ಸೆಂ.ಮೀ ಮಳೆಯಾಗಿದೆ ಎಂದು ಪ್ರಾದೇಶಿಕ ವಿಭಾಗದ ಹವಾಮಾನ ಮುನ್ಸೂಚನೆ ನಿರ್ದೇಶಕ ಸಿ ಎಸ್ ಪಾಟೀಲ್ ತಿಳಿಸಿದರು.
ಕರಾವಳಿ ಜಿಲ್ಲೆಗಳಿಗೆ ರೆಡ್ ಅಲರ್ಟ್: ಶುಕ್ರವಾರದವರೆಗೂ ಭಾರೀ ಮಳೆ ಮುನ್ಸೂಚನೆ ಬಂಗಾಳ ಉಪಸಾಗರದ ಉತ್ತರ ಒಡಿಶಾದ ಬಳಿ ವಾಯುಭಾರ ಕುಸಿತವಾಗಿದೆ. ಈ ಹಿನ್ನೆಲೆ ಕರಾವಳಿ ಜಿಲ್ಲೆಗಳಲ್ಲಿ ಸೆ.21 ರಿಂದ ಸೆ.25 ರವರೆಗೂ ಭಾರೀ ಮಳೆಯಾಗಲಿದೆ. 20 ಸೆಂ. ಮೀಟರ್ ಗೂ ಅಧಿಕ ಮಳೆಯಾಗುವುದರಿಂದ ಸೆ.21 ರಂದು ರೆಡ್ ಅಲರ್ಟ್ ನೀಡಲಾಗಿದೆ. 22 ರಂದು ಆರೆಂಜ್ ಅಲರ್ಟ್, 23 ಕ್ಕೆ ಯೆಲ್ಲೋ ಅಲರ್ಟ್ ನೀಡಲಾಗಿದೆ ಎಂದು ತಿಳಿಸಿದರು.
ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ 21 ರಿಂದ 25 ರವರೆಗೆ ಎಲ್ಲಾ ಕಡೆ ಮಳೆಯಾಗಲಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಕೊಡಗು, ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಸೆ.21 ರಂದು ಆರೆಂಜ್ ಅಲರ್ಟ್ ನೀಡಲಾಗಿದೆ. ಸೆ.22 ಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ, ಸೆ.25 ರಂದು ಯೆಲ್ಲೋ ಅಲರ್ಟ್ ಇರಲಿದೆ. ಬೆಂಗಳೂರಿನಲ್ಲಿ ಇಂದು ಮತ್ತ ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಸಿ ಎಸ್ ಪಾಟೀಲ್ ಮಾಹಿತಿ ನೀಡಿದರು.
ಮೀನುಗಾರರಿಗೆ ಎಚ್ಚರಿಕೆ:
ಕರ್ನಾಟಕದ ಕರಾವಳಿಯಲ್ಲಿ ಗಾಳಿಯ ವೇಗ 45-55 ಕಿ.ಮೀ ತಲುಪುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.