ಬೆಂಗಳೂರು :ರಾಜ್ಯದಲ್ಲಿ ಹೊಸದಾಗಿ ಮೂರು ಸಾವಿರ ಭೂಮಾಪಕರನ್ನು ಶೀಘ್ರದಲ್ಲೇ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ವಿಧಾನಸಭೆಯಲ್ಲಿ ತಿಳಿಸಿದರು.
ಇಂದು ಪ್ರಶ್ನೋತ್ತರ ವೇಳೆ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ 4,020 ಭೂ ಮಾಪಕರಿದ್ದು, ಈ ಪೈಕಿ ರಾಜ್ಯದಲ್ಲಿ ಒಟ್ಟು 3,379 ಭೂ ಮಾಪಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯ ಸರ್ಕಾರ ಇತ್ತೀಚೆಗೆ 2,685 ಭೂ ಮಾಪಕರನ್ನು ಲೈಸನ್ಸ್ ಪಡೆದವರನ್ನು ನೇಮಿಸಿಕೊಂಡು ಸರ್ವೇ ಕಾರ್ಯಕ್ಕೆ ನಿಯೋಜಿಸಿದೆ ಎಂದು ಹೇಳಿದರು. ಖಾಲಿ ಇರುವ ಭೂ ಮಾಪಕರನ್ನು ನೇಮಕ ಮಾಡಲು ಮೂರು ಸಾವಿರ ಭೂ ಮಾಪಕರ ಹುದ್ದೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ.
ಇದರಿಂದ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಜಮೀನುಗಳ ಸರ್ವೇ ಕಾರ್ಯ ತ್ವರಿತವಾಗಿ ನಡಸಲು ಅನುಕೂಲವಾಗಲಿದೆ ಎಂದರು. ಪ್ರತಿ ತಾಲೂಕಿನಲ್ಲೂ ಭೂಮಾಪಕರ ಕೊರತೆಯಿಂದ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಬಾಕಿ ಇದ್ದು, ಇನ್ನೂ ಆರು ತಿಂಗಳಲ್ಲಿ ಸರ್ವೇ ಪ್ರಕ್ರಿಯೆ ಮುಗಿಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದರು.
ಈ ವೇಳೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಪ್ರವೇಶಿಸಿ, ಪ್ರತಿ ತಾಲೂಕಿನಲ್ಲಿ ಭೂ ಮಾಪಕರ ಸಮಸ್ಯೆ ಇದೆ. ಇರುವ ಒಬ್ಬರಿಂದ ಏನೂ ಮಾಡಲು ಸಾಧ್ಯವಿಲ್ಲ. ಲೈಸನ್ಸ್ ಪಡೆದವರು ಎಲ್ಲವನ್ನೂ ಮಾಡಲಾಗದು. ಅವರಿಗೆ ಇತಿಮಿತಿ ಇರುವುದರಿಂದ ಭೂ ವ್ಯಾಜ್ಯಗಳ ಸಂಖ್ಯೆ ಹೆಚ್ಚುತ್ತಿದೆ. ಹಾಗಾಗಿ, ಏನಾದರೊಂದು ಪರಿಹಾರ ಒದಗಿಸಬೇಕು ಎಂದು ಸಲಹೆ ಮಾಡಿದರು.
ಇದಕ್ಕೆ ದನಿಗೂಡಿಸಿದ ಶಾಸಕ ಕುಮಾರ ಬಂಗಾರಪ್ಪ, ಮೊದಲು ಕಂದಾಯ ಇಲಾಖೆಯಲ್ಲಿ ಹೊರಗುತ್ತಿಗೆ ನೇಮಕಾತಿ ನಿಲ್ಲಿಸಿ. ನಿಮ್ಮ ಇಲಾಖೆಗೆ ಶಾಶ್ವತವಾಗಿರುವ ಸಿಬ್ಬಂದಿ ನೇಮಕ ಮಾಡಿ. ಲಕ್ಷಾಂತರ ಪೋಡಿ ಪ್ರಕರಣ ಬಾಕಿ ಇವೆ. ಇದು ರಾಜ್ಯದ ಸಮಸ್ಯೆ ಎಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಸಚಿವ ಅಶೋಕ್, ಈ ಎಲ್ಲ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿದ್ದು, ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಇಲಾಖೆಯಲ್ಲಿ ಹಲವು ಬದಲಾವಣೆ ತರಲು ತೀರ್ಮಾನಿಸಿದ್ದು, ಹೊಸ ಸಾಫ್ಟ್‌ವೇರ್ ಪರಿಚಯಿಸಿ, ಆರು ತಿಂಗಳಲ್ಲಿ ಬಾಕಿ ಇರುವ ಎಲ್ಲ ಪ್ರಕರಣಗಳು ಇತ್ಯರ್ಥವಾಗುವ ನಿರೀಕ್ಷೆ ಇದೆ ಎಂದರು.
ಮದ್ದೂರಿನಲ್ಲಿ ಆಡಳಿತ ಸೌಧ :ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನಲ್ಲಿ ಆಡಳಿತ ಸೌಧ ಕಟ್ಟಡ ನಿರ್ಮಾಣಕ್ಕೆ ರೇಷ್ಮೆ ಇಲಾಖೆಯಿಂದ ನಿವೇಶನ ಮಂಜೂರಾದ ತಕ್ಷಣವೇ ಕಟ್ಟಡ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಜೆಡಿಎಸ್ ಶಾಸಕ ಡಿ ಸಿ ತಮ್ಮಣ್ಣ ಅವರ ಪ್ರಶ್ನೆಗೆ ಸಚಿವ ಅಶೋಕ್ ಉತ್ತರಿಸಿದರು.
ಮದ್ದೂರು ಪಟ್ಟಣದಲ್ಲಿ ಆಡಳಿತ ಸೌಧವನ್ನು 45 ಮೀ. ಉದ್ದ 10 ಮೀ. ಅಗಲವಿರುವ ಜಾಗದಲ್ಲಿ ನೆಲ ಮಹಡಿ ಮತ್ತು ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲು ಲೋಕೋಪಯೋಗಿ ಇಲಾಖೆಯಿಂದ ಒಂದೂವರೆ ಕೋಟಿ ರೂ. ಅಂದಾಜುವೆಚ್ಚ ಮಾಡಲಾಗಿದೆ ಎಂದರು.
ಪ್ರಸ್ತುತ ಈ ಕಟ್ಟಡಕ್ಕೆ ಸ್ಥಳಾವಕಾಶದ ಕೊರತೆ ಇರುವುದು ಗಮನಕ್ಕೆ ಬಂದಿದೆ. ರೇಷ್ಮೆ ಇಲಾಖೆಗೆ ಸೇರಿದ 3.03 ಎಕರೆ ಜಮೀನು ಗುರುತಿಸಲಾಗಿದೆ. ಇದನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲು ರೇಷ್ಮೆ ಇಲಾಖೆ ಕಾರ್ಯದರ್ಶಿ ಜತೆ ಚರ್ಚಿಸಿದ್ದು, ನಿವೇಶನ ನಮ್ಮ ಇಲಾಖೆಗೆ ಹಸ್ತಾಂತರವಾದ ಕೂಡಲೇ ಎಲ್ಲಾ ಸೌಲಭ್ಯಗಳುಳ್ಳ ಸುಸಜ್ಜಿತವಾದ ಆಡಳಿತ ಸೌಧ ನಿರ್ಮಿಸುವ ಭರವಸೆ ನೀಡಿದರು.
ಹಕ್ಕು ಪತ್ರ ವಿತರಿಸುವ ಸಂಬಂಧ ನಾಳೆ ಸಭೆ :ರೂಪಕಲಾ ಎಂ. ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ವಿ.ಸೋಮಣ್ಣ, ಕೆಜಿಎಫ್ ನಗರಸಭೆ ವ್ಯಾಪ್ತಿಯಲ್ಲಿ ಹಕ್ಕು ಪತ್ರ ವಿತರಿಸುವ ಸಂಬಂಧ ನಾಳೆ ಸಭೆ ನಡೆಸಲಾಗುವುದು ಎಂದರು. ಕೆಜಿಎಫ್‌ನಲ್ಲಿ 17 ಕೊಳಚೆ ಪ್ರದೇಶಗಳನ್ನು ಗುರುತಿಸಲಾಗಿದೆ. ಕಾಯ್ದೆ ಪ್ರಕಾರ ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.
ಆದರೆ, ಮಂಡಳಿಯ ವತಿಯಿಂದ ಇದನ್ನು ಅಭಿವೃದ್ಧಿಪಡಿಸಲು ಸಾಧ್ಯವೇ ಎಂಬುದರ ಕುರಿತು ವಿವರವಾದ ಮಾಹಿತಿ ಕೋರಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಇಲ್ಲಿನ ನಿವಾಸಿಗಳಿಗೆ ಶಾಶ್ವತವಾದ ಹಕ್ಕುಪತ್ರ ನೀಡಬೇಕು ಎಂಬ ಉದ್ದೇಶವಿದೆ. ಆದರೆ, ನಿಯಮಗಳು ಅಡ್ಡಿಯಾಗಿರುವುದರಿಂದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದರು.
ರಾಜ್ಯಕ್ಕೆ 275 ಹೊಸ ಸಂಚಾರಿ ಪಶುಚಿಕಿತ್ಸಾ ಘಟಕ ಮಂಜೂರು :ದೇಶದಲ್ಲೇ ಕರ್ನಾಟಕಕ್ಕೆ 275 ಹೊಸ ಸಂಚಾರಿ ಪಶುಚಿಕಿತ್ಸಾ ಘಟಕ ಮಂಜೂರಾಗಿದ್ದು, ಈ ತಿಂಗಳಲ್ಲೇ ಮುಖ್ಯಮಂತ್ರಿ ಅವರಿಂದ ಲೋಕಾರ್ಪಣೆ ಮಾಡಲಾಗುವುದು ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರು, ಶಾಸಕ ಶ್ರೀಮಂತ ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದರು.
ಕೇಂದ್ರದಿಂದ 275 ಸಂಚಾರಿ ಘಟಕ ಪಡೆದ ಮೊದಲ ರಾಜ್ಯ ಕರ್ನಾಟಕವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿ ಲೋಕಾರ್ಪಣೆ ದಿನಾಂಕ ನಿಗದಿಪಡಿಸಲಾಗುವುದು ಎಂದರು. ಹಲವಾರು ವರ್ಷಗಳಿಂದ ಎಲ್ಲೆಲ್ಲಿ ಅಗತ್ಯವಿದೆಯೋ ಅಂತಹ ಕಡೆ ಈ ಸಂಚಾರಿ ಪಶು ಚಿಕಿತ್ಸಾ ವಾಹನ ನಿಯೋಜನೆ ಮಾಡುತ್ತೇವೆ. ಪ್ರತಿ ಒಂದು ಲಕ್ಷ ಜಾನುವಾರು ಘಟಕಗಳಿಗೆ ಒಂದರಂತೆ ಒದಗಿಸಲಾಗುವುದು. ಇವು ತಾಲೂಕು ಕೇಂದ್ರಗಳಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.