ಕರ್ನಾಟಕ

karnataka

ETV Bharat / state

ಕೋರ್ಟ್​ನಿಂದ ಆದೇಶ ಬರುತ್ತಿದ್ದಂತೆ 13 ಸಾವಿರ ಪದವೀಧರ ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ ಭರವಸೆ - graduate teachers

ನ್ಯಾಯಾಲಯದ ಆದೇಶ ಬರುತ್ತಿದ್ದಂತೆ 13 ಸಾವಿರ ಪದವೀಧರ ಶಿಕ್ಷಕರ ನೇಮಕಾತಿ ಪತ್ರಗಳನ್ನು ಒದಗಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

Minister Madhu Bangarappa
ಶಿಕ್ಷಣ ಸಚಿವ ಮಧು ಬಂಗಾರಪ್ಪ

By

Published : Jul 6, 2023, 5:58 PM IST

ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು

ಬೆಂಗಳೂರು:''ಪ್ರಾಥಮಿಕ ಶಾಲೆಗಳಿಗೆ 13 ಸಾವಿರ ಪದವೀಧರ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆಗಳು ಚುರುಕಾಗಿ ನಡೆಯುತ್ತಿದ್ದು, ನ್ಯಾಯಾಲಯದ ಆದೇಶ ಬರುತ್ತಿದ್ದಂತೆ ನೇಮಕಾತಿ ಪತ್ರಗಳನ್ನು ನೀಡಲಾಗುವುದು'' ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇಂದು ಗುರುವಾರ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕರಾದ ಬಿ.ವೈ. ವಿಜಯೇಂದ್ರ ಮತ್ತು ಮಹೇಶ್ ಟೆಂಗಿನಕಾಯಿ ಅವರು ವಿಷಯ ಪ್ರಸ್ತಾಪಿಸಿ, ಹಿಂದಿನ ಸರ್ಕಾರದ ಅವಯಲ್ಲಿ ಪ್ರಾಥಮಿಕ ಶಾಲೆಗಳಿಗೆ 15 ಸಾವಿರ ಶಿಕ್ಷಕರ ನೇಮಕಾತಿಗೆ ಅಸೂಚನೆ ಹೊರಡಿಸಲಾಗಿತ್ತು. ಅದರಲ್ಲಿ 13,052 ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಗೊಂಡಿದೆ. ಆದರೆ, ಈವರೆಗೂ ನೇಮಕಾತಿ ಆದೇಶ ನೀಡಿಲ್ಲ. ಈ ಅಭ್ಯರ್ಥಿಗಳು ಬೆಂಗಳೂರಿನಲ್ಲಿ 2 ರಿಂದ 3 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಕನಿಷ್ಠ ಪಕ್ಷ ಅವರನ್ನು ಅಲ್ಲಿಗೆ ಹೋಗಿ ಸಚಿವರು ಭೇಟಿ ಮಾಡಿಲ್ಲ'' ಎಂದು ಆಕ್ಷೇಪಿಸಿದರು.

''ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ನ್ಯಾಯಾಲಯದ ತೀರ್ಪಿಗೆ ಬದ್ಧವಾಗಿರುವ ಷರತ್ತಿಗೊಳಪಟ್ಟು ನೇಮಕಾತಿ ಆದೇಶ ನೀಡಲಾಗಿದೆ. ಶಿಕ್ಷಕರ ನೇಮಕಾತಿ ವಿಷಯದಲ್ಲಿ ಅದೇ ಕ್ರಮವನ್ನು ಅನುಸರಿಸಬೇಕು'' ಎಂದು ಒತ್ತಾಯಿಸಿದರು.

ಜು.17ಕ್ಕೆ ನ್ಯಾಯಾಲಯದಲ್ಲಿ ವಿಚಾರಣೆ:ಇದಕ್ಕೆ ಉತ್ತರಿಸಿದ ಸಚಿವ ಮಧುಬಂಗಾರಪ್ಪ ಅವರು, ''ಪ್ರತಿಭಟನೆ ನಡೆಸುತ್ತಿರುವವರ ಜೊತೆ ತಾವು ಸಮಾಲೋಚನೆ ನಡೆಸಿದ್ದು, ಈ ವಿಚಾರವಾಗಿ ರಾಜ್ಯದ ಅಡ್ವೊಕೇಟ್ ಜನರಲ್ ಜೊತೆ 4 ಸಭೆಗಳನ್ನು ನಡೆಸಲಾಗಿದೆ. ಇಲ್ಲಿ ಸಣ್ಣ ಕಾನೂನಿನ ತೊಡಕಿದೆ. ಅಭ್ಯರ್ಥಿಗಳು ಭಯ ಪಡುವ ಅಗತ್ಯವಿಲ್ಲ. ಈ ತಿಂಗಳ 17ರಂದು ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ. ಆ ವೇಳೆ ಸರಿಯಾದ ವಾದ ಮಂಡಿಸಿ ನೇಮಕಾತಿ ಆದೇಶ ನೀಡಲು ಅನುಮತಿ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುವುದು'' ಎಂದರು.

''ಕೇವಲ ಒಂದೇ ಒಂದು ಪ್ರಕರಣ ಬಾಕಿ ಇದ್ದು, ಅಭ್ಯರ್ಥಿಯ ಆದಾಯವನ್ನು ತಂದೆಯ ಅಥವಾ ಪತಿಯ ಆದಾಯದ ಮೂಲದಿಂದ ಪರಿಗಣಿಸಬೇಕೇ ಎಂಬ ಚರ್ಚೆ ನಡೆಯುತ್ತಿದೆ. ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ. ಈ ನೇಮಕಾತಿ ಪ್ರಕ್ರಿಯೆ ಶೀಘ್ರವಾಗಿ ಪೂರ್ಣಗೊಳ್ಳುವ ಅವಶ್ಯಕತೆ ತಮ್ಮ ಇಲಾಖೆಗೂ ಇದೆ. ಶಿಕ್ಷಕರ ಕೊರತೆ ವ್ಯಾಪಕವಾಗಿದೆ. ನ್ಯಾಯಾಲಯದ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸದೇ ಮುಂದುವರೆಸಬೇಕು ಎಂದು ಸೂಚಿಸಿದೆ. ಆದರೆ, ನೇಮಕಾತಿ ಆದೇಶ ನೀಡದಂತೆ ಸ್ಪಷ್ಟಪಡಿಸಿದೆ'' ಎಂದು ಹೇಳಿದರು.

ದೈವಾರಾಧನೆ ಪ್ರದರ್ಶನ ಬಗ್ಗೆ ಪರಿಶೀಲನೆ:ಬಿಜೆಪಿ ಸದಸ್ಯ ಸುನಿಲ್ ಕುಮಾರ್ ಅವರ ಮತ್ತೊಂದು ಪ್ರಸ್ತಾಪಕ್ಕೆ ಉತ್ತರ ನೀಡಿದ ಸಚಿವರು, ಕರಾವಳಿಯ 4 ಜಿಲ್ಲೆಗಳಲ್ಲಿ ಪ್ರತಿಭಾ ಕಾರಂಜಿಯಲ್ಲಿ ಸಾಂಸ್ಕೃತಿಕ ಕಲೆಗಳ ಜೊತೆ ದೈವಾರಾಧನೆಯನ್ನೂ ಪ್ರದರ್ಶನ ಮಾಡುವಂತೆ ನೀಡಿರುವ ಸೂಚನೆಯನ್ನು ಪುನರ್ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಇದನ್ನೂ ಓದಿ:16ನೇ ಹಣಕಾಸು ಆಯೋಗದ ಜಿಎಸ್​ಟಿ ಕೌನ್ಸಿಲ್​ನಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಮುನ್ನೆಚ್ಚರಿಕೆ: ಸಿಎಂ ಸಿದ್ದರಾಮಯ್ಯ ಭರವಸೆ

ABOUT THE AUTHOR

...view details