ಕರ್ನಾಟಕ

karnataka

2022 ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದಾಖಲೆ ಪ್ರಮಾಣದ ಸರಕು ಸಾಗಣಿಕೆ

By

Published : Feb 8, 2023, 12:37 PM IST

ಕೋವಿಡ್‌ ಬಳಿಕ ಬಹುತೇಕ ವಿಮಾನಯಾನ ಸೇವೆ ಚುರುಕು -2022 ರಲ್ಲಿ ದಾಖಲೆ ಪ್ರಮಾಣದ ಸರಕು ಸಾಗಣಿಕೆ - ಸೇವೆ ಆರಂಭಿಸಿದ "ಆಕಾಶ ಏರ್‌ಲೈನ್‌" ಸಂಸ್ಥೆ

Kempegowda International Airport
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ) :ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗುತ್ತಿದೆ. ಅದಕ್ಕೆ ಸಾಕ್ಷಿಯಾಗಿ 2022 ನೇ ಸಾಲಿನಲ್ಲಿ ಕೆಐಎಎಲ್ ನಲ್ಲಿ ದೇಶಿಯ ಮತ್ತು ಅಂತಾರಾಷ್ಟ್ರೀಯ ವಿಮಾನ ಮಾರ್ಗಗಳ ಸಂಖ್ಯೆ ಹೆಚ್ಚಾಗಿದ್ದು ಒಟ್ಟು 27.50 ಮಿಲಿಯನ್ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಹಾಗೆಯೇ ಸರಕು ಸಾಗಣೆಯಲ್ಲಿ ದಾಖಲೆಯನ್ನು ಮಾಡಲಾಗಿದ್ದು, 2022ರಲ್ಲಿ 412,668 ಮೆಟ್ರಿಕ್ ಟನ್ ಸರಕು ಸಾಗಣಿಕೆಯನ್ನು ಮಾಡಲಾಗಿದೆ. 2022ರ ಡಿಸೆಂಬರ್‌ 23ರಂದು 1,07,825 ಪ್ರಯಾಣಿಕರು ಪ್ರಯಾಣಿಸುವ ಮೂಲಕ ಹೊಸ ದಾಖಲೆಯನ್ನು ಮಾಡಿದೆ.

16 ಸ್ಥಳಗಳು ಹೊಸದಾಗಿ ಸೇರ್ಪಡೆ :ಕೋವಿಡ್‌ ಬಳಿಕ ಬಹುತೇಕ ವಿಮಾನಯಾನ ಸಂಸ್ಥೆಗಳು ತಮ್ಮ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಪುನಾರಂಭಿಸಿವೆ ಹಾಗೂ 2022 ರಲ್ಲಿ ಹೆಚ್ಚಿನ ಸಂಖ್ಯೆಯ ನಗರಗಳಿಗೆ ಸಂಪರ್ಕ ಕಲ್ಪಿಸಿವೆ. ಪ್ರಸ್ತುತ, ಬಿಎಲ್​ಆರ್​ ವಿಮಾನ ನಿಲ್ದಾಣವು ಭಾರತದಾದ್ಯಂತ 75 ಸ್ಥಳಗಳಿಗೆ ಸಂಪರ್ಕ ಹೊಂದಿದ್ದು, ಪೂರ್ವ ಕೋವಿಡ್‌ಗೆ ಹೋಲಿಸಿದರೆ 16 ಸ್ಥಳಗಳು ಹೊಸದಾಗಿ ಸೇರ್ಪಡೆಗೊಂಡಿದೆ. "ಆಕಾಶ ಏರ್‌ಲೈನ್‌" ಸಂಸ್ಥೆಯು ಹೊಸದಾಗಿ ಸೇವೆಯನ್ನು ಆರಂಭಿಸಿದೆ, ಈ ಏರ್‌ಲೈನ್‌ ಪ್ರಾರಂಭಗೊಂಡ 6 ತಿಂಗಳೊಳಗೆ 11 ಸ್ಥಳಗಳಿಗೆ ಪ್ರತಿದಿನ 30 ಬಾರಿ ವಿಮಾನಯಾನ ನಡೆಸುತ್ತಿದೆ.

ಮಾರ್ಚ್ 2022 ರಲ್ಲಿ ನಿಗದಿತ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳ ಪುನಾರಂಭದ ನಂತರ, ಕ್ವಾಂಟಾಸ್ ಏರ್‌ವೇಸ್‌ನಿಂದ ಬೆಂಗಳೂರು ಮತ್ತು ಸಿಡ್ನಿ ನಡುವೆ ನೇರ ಮಾರ್ಗವನ್ನು ಪರಿಚಯಿಸಲಾಯಿತು. ಇದು ದಕ್ಷಿಣ ಭಾರತದಿಂದ ಆಸ್ಟ್ರೇಲಿಯಾಕ್ಕೆ ಮೊದಲ ನೇರ ಸಂಪರ್ಕವಾಗಿದೆ. ಇನ್ನು, ಬಿಎಲ್‌ಆರ್‌ ಮತ್ತು ದಕ್ಷಿಣ ಭಾರತದಿಂದ ಬೇಡಿಕೆ ಹೆಚ್ಚಿದ ಹಿನ್ನೆಲೆಯಲ್ಲಿ ಎಮಿರೇಟ್ಸ್ A380 (ವಿಶ್ವದ ಅತಿ ದೊಡ್ಡ ವಿಮಾನ) ಸೇವೆಯನ್ನು ದುಬೈಗೆ ಪ್ರಾರಂಭಿಸಲಾಗಿದೆ.

2022 ರಲ್ಲಿ ದಾಖಲೆ ಪ್ರಮಾಣದ ಸರಕು ಸಾಗಣಿಕೆ ಪ್ರಯಾಣ

ಜೊತೆಗೆ, ಏರ್ ಇಂಡಿಯಾ ತನ್ನ ಬೆಂಗಳೂರು - ಸ್ಯಾನ್ ಫ್ರಾನ್ಸಿಸ್ಕೊ ಮೂರು-ಸಾಪ್ತಾಹಿಕ ಮಾರ್ಗವನ್ನು ಡಿಸೆಂಬರ್ 2022ರಲ್ಲಿ ಪುನರ್‌ ಪ್ರಾರಂಭ ಮಾಡಿದೆ. ಈ ವಿಮಾನಯಾನದಿಂದ ಬಿಎಲ್​ಆರ್​ ವಿಮಾನ ನಿಲ್ದಾಣವು ಉತ್ತರ ಅಮೆರಿಕಕ್ಕೆ ನೇರ ಸಂಪರ್ಕ ಹೊಂದುವ ದಕ್ಷಿಣ ಮತ್ತು ಮಧ್ಯ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. ಇದು ಬಿಎಲ್​ಆರ್​ ಮಾರುಕಟ್ಟೆಯ ವಿಕಾಸ / ಅಭಿವೃದ್ಧಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದೇ ಮಾದರಿ ಇತರ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ಸಹ 2022 ರಲ್ಲಿ ಬಿಎಲ್​ಆರ್​ ವಿಮಾನ ನಿಲ್ದಾಣದಿಂದ ವಿಮಾನಯಾನವನ್ನು ಪುನಾರಂಭಿಸಿವೆ.

ಪ್ರಯಾಣಿಕರ ಸಂಖ್ಯೆ ಹೆಚ್ಚಳ :ಬಿಎಲ್​ಆರ್​ ವಿಮಾನ ನಿಲ್ದಾಣವು ಬೌಗೋಳಿಕವಾಗಿ ಪ್ರಾದೇಶಿಕ ಸಂಪರ್ಕದ ಕೇಂದ್ರವಾಗಿದ್ದು, ಈ ಕಾರಣದಿಂದಾಗಿ ವರ್ಗಾವಣೆ ಪ್ರಯಾಣಿಕರ ಸಂಖ್ಯೆ ಹೆಚ್ಚಳಕ್ಕೂ ಕಾರಣವಾಗಿದೆ. 100 ಕ್ಕೂ ಹೆಚ್ಚು ದೈನಂದಿನ ನಿರ್ಗಮನಗಳೊಂದಿಗೆ, ವರ್ಗಾವಣೆ ಪ್ರಯಾಣಿಕರ ಪಾಲು ಶೇ.15ಕ್ಕೆ ಏರಿದೆ. (ಪೂರ್ವ ಕೋವಿಡ್ ವರ್ಷಗಳಿಗೆ ಹೋಲಿಸಿದರೆ ಶೇ.5ರಷ್ಟು). ಇದು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಆದ್ಯತಾ ವರ್ಗಾವಣೆ /ಸಾರಿಗೆ ವಿಮಾನ ನಿಲ್ದಾಣವಾಗಿ, ಬಿಎಲ್ಆರ್ ವಿಮಾನ ನಿಲ್ದಾಣ ಸ್ಥಾನ ಪಡೆದುಕೊಂಡಿದೆ.

2022 ವರ್ಷದಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾ, ಕೊಚ್ಚಿ ಮತ್ತು ಹೈದರಾಬಾದ್‌ ಅಗ್ರ ದೇಶೀಯ ಮಾರ್ಗಗಳಾಗಿ, ದೇಶೀಯಾ ಟ್ರಾಫಿಕ್‌ಗೆ ಸರಿಸುಮಾರು ಶೇ.40ರಷ್ಟು ಕೊಡುಗೆ ನೀಡಿವೆ. ದುಬೈ, ಮಾಲೆ, ಸಿಂಗಾಪುರ್, ದೋಹಾ ಮತ್ತು ಅಬುಧಾಬಿಗಳು ಬಿಎಲ್​ಆರ್​ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸಂಚಾರಕ್ಕೆ ಸುಮಾರು ಶೇ.47ರಷ್ಟು ಕೊಡುವ ಅಗ್ರ ಅಂತಾರಾಷ್ಟ್ರೀಯ ಮಾರ್ಗಗಳಾಗಿವೆ.

ಕೋವಿಡ್ ವರ್ಷಗಳು ನಮಗೆ ತುಂಬಾ ಸವಾಲಾಗಿತ್ತು. ಅದರ ಹೊರತಾಗಿಯೂ, ಪ್ರಯಾಣಿಕರ ದಟ್ಟಣೆಯಲ್ಲಿ ಸ್ಥಿರವಾದ ಚೇತರಿಕೆಯಿಂದ ಸಂತಸವಾಗಿದೆ. ಪ್ರಯಾಣಿಕರ ಸೌಕರ್ಯ ಮತ್ತು ತಡೆರಹಿತ ಪ್ರಯಾಣವು ಆದ್ಯತೆಯಾಗಿ ಮುಂದುವರಿಯುತ್ತದೆ. ಇದರ ಜೊತೆಗೆ, ನಮ್ಮ ಸರಕು ಪಾಲುದಾರಿಕೆಗಳು ನಮ್ಮ ವ್ಯಾಪಾರದ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿವೆ.

2022ರಲ್ಲಿ ಹೊಸ ಮೈಲಿಗಲ್ಲು ಸಾಧನೆ : ಬಿಎಲ್​ಆರ್​ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ 2 (T2) ಉದ್ಘಾಟನೆಯೊಂದಿಗೆ ನಮ್ಮ ಕಾರ್ಯಾಚರಣೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ 2022 ವರ್ಷವು ನಮಗೆ ಮಹತ್ವದ ಮೈಲಿಗಲ್ಲು ಸಾಧಿಸಲು ಸಾಧ್ಯವಾಗಿದೆ. T2 ಕಾರ್ಯಾಚರಣೆಯೊಂದಿಗೆ, ನಾವು ದಕ್ಷಿಣ ಮತ್ತು ಮಧ್ಯ ಭಾರತಕ್ಕೆ ನೈಸರ್ಗಿಕ ಹೆಬ್ಬಾಗಿಲಾಗಿ ಸೇವೆ ಸಲ್ಲಿಸುವ ಮೂಲಕ ಇನ್ನಷ್ಟು ಉತ್ತಮ ಸ್ಥಾನವನ್ನು ಪಡೆದುಕೊಳ್ಳುತ್ತೇವೆ ಎಂಬ ಭರವಸೆ ಇದೆ ಎಂದು ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ (BIAL) ಮುಖ್ಯ ಕಾರ್ಯತಂತ್ರ ಮತ್ತು ಅಭಿವೃದ್ಧಿ ಅಧಿಕಾರಿ ಸಾತ್ಯಕಿ ರಘುನಾಥ್ ತಿಳಿಸಿದ್ದಾರೆ.

BLR ಕಾರ್ಗೋ ಸತತ ಎರಡನೇ ವರ್ಷ, ಪೆರಿಷೇಬಲ್‌ ಸರಕುಗಳ ಸಾಗಣೆಯಲ್ಲಿ ಮೊದಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಜೊತೆಗೆ, ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಮೂರನೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿಯೂ ಹೆಸರು ಪಡೆದುಕೊಂಡಿದೆ. ಇದಲ್ಲದೆ UPS, DHL ಮತ್ತು FedEx ಎಂಬ ವಿಶ್ವದ ಮೂರು ಬಹು ದೊಡ್ಡ ಎಕ್ಸ್‌ಪ್ರೆಸ್ ಸರಕು ಸಾಗಣೆದಾರರನ್ನು ಹೊಂದಿರುವ ಭಾರತದ ಎರಡನೇ ವಿಮಾನ ನಿಲ್ದಾಣವೂ ಆಗಿದೆ ಎಂದು ಸಾತ್ಯಕಿ ಹೇಳಿದ್ದಾರೆ.

ದಾಖಲೆ ಪ್ರಮಾಣದ ಸರಕು ಸಾಗಣಿಕೆ :14 ದೇಶೀಯ ಮತ್ತು ವಿದೇಶಿ ಸರಕು ವಾಹಕಗಳು 41 ನೇರ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬಿಎಲ್​ಆರ್​ ಕಾರ್ಗೋ, ದೇಶದ ಅಗ್ರ ಕಾರ್ಗೋ ವಿಮಾನ ನಿಲ್ದಾಣಗಳಲ್ಲಿ BLR ವಿಮಾನ ನಿಲ್ದಾಣದ ಸ್ಥಾನವನ್ನು ಭದ್ರ ಮಾಡಿಕೊಂಡಿದೆ. 2022ರಲ್ಲಿ ಸರಕು ಪ್ರಮಾಣವು 412,668 MT ಆಗಿದ್ದು, ಇದು ವಿಮಾನ ನಿಲ್ದಾಣದ ಪ್ರಾರಂಭದ ದಿನದಿಂದ ನಿರ್ವಹಿಸಲಾದ ಅತ್ಯಧಿಕ ಪ್ರಮಾಣದ ಸರಕಾಗಿದೆ. ಜುಲೈ ತಿಂಗಳಲ್ಲಿ ಅತಿ ಹೆಚ್ಚು ಟನ್‌ ಸರಕು ಸಾಗಣೆ ಆಮದು ಮಾಡಿಕೊಳ್ಳುವ ಮೂಲಕ 2022ರಲ್ಲಿ ದೇಶೀಯ ಸರಕು ಶೇ.8ರಷ್ಟು ಹೆಚ್ಚಳವಾಗಿದೆ. ಸೆಪ್ಟೆಂಬರ್ 29, 2022 ರಂದು ಒಂದೇ ದಿನದಲ್ಲಿ 1,612 MT ಅತ್ಯಧಿಕ ಸರಕು ಸಾಗಣೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ :ಕೆಐಎಬಿ ಆಡಳಿತ ಮಂಡಳಿ ವಿರುದ್ಧ ಅಸಮಧಾನಗೊಂಡ ಕೆಎಸ್​​​ಡಿಸಿ ಕಾರು ಚಾಲಕರು

ABOUT THE AUTHOR

...view details