ಬೆಂಗಳೂರು: ಐಆರ್ಬಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ ನೇಮಕಾತಿಯಲ್ಲಿ 28 ಅಭ್ಯರ್ಥಿಗಳ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂಬ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳ ಜೊತೆ ಸಮಾಲೋಚಿಸಿ ಈ ಬಗ್ಗೆ ಮರುಪರಿಶೀಲನೆ ಮಾಡುತ್ತೇನೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಹಾಗೂ ಇತರೆ ಸದಸ್ಯರ ನಿಯಮ 330ರ ಅಡಿ ನಡೆಸಿದ ಚರ್ಚೆಗೆ ಉತ್ತರ ನೀಡಿದ ಅವರು, 2012ನೇ ಸಾಲಿನಲ್ಲಿ ಕೆಎಸ್ಆರ್ಪಿ, ಐಆರ್ಬಿ ಹಾಗೂ ಕೆಎಸ್ಐಎಸ್ಎಫ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿಯ ಅಧಿಸೂಚನೆಯನ್ನು ನೇಮಕಾತಿ ಕಚೇರಿಯಿಂದ ಏಕಕಾಲದಲ್ಲಿ ಹೊರಡಿಸಲಾಗಿದೆ.
ಈ 3 ಘಟಕಗಳ ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನೂ ಸಹ ಏಕಕಾಲದಲ್ಲಿ ಪ್ರಕಟಣೆಗೊಳಿಸಲಾಗಿದೆ. ಮೂರು ಘಟಕಗಳಿಗೆ ಏಕಕಾಲದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಹೆಚ್ಚುವರಿ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳಿಗೂ ಸಹ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ತಾತ್ಕಾಲಿಕ ಆಯ್ಕೆ ಪಟ್ಟಿಯನ್ವಯ ಹಾಗೂ ದಾಖಲಾತಿ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಅರ್ಹಗೊಂಡ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ ನೇಮಕಾತಿ ಆದೇಶವನ್ನು ಹೊರಡಿಸಲಾಗಿರುತ್ತದೆ. ಸದರಿ ಅಂತಿಮ ಆಯ್ಕೆ ಪಟ್ಟಿಯಲ್ಲಿ ಅರ್ಜಿದಾರರುಗಳು ಅರ್ಹತೆಯನುಸಾರ ಸ್ಥಾನವನ್ನು ಪಡೆದಿರುವುದಿಲ್ಲ. ಆದಾಗ್ಯೂ ಸಹ ಅರ್ಜಿದಾರರು ಕೇವಲ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾದ ಕಾರಣವನ್ನು ಪ್ರತಿಪಾದಿಸಿಕೊಂಡು ನೇಮಕಾತಿ ಆದೇಶ ನೀಡುವಂತೆ ಕೋರುತ್ತಿರುತ್ತಾರೆ ಎಂದು ವಿವರಿಸಿದರು.
ಈ ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಈ ಅರ್ಜಿಯಲ್ಲಿ ನೇಮಕಾತಿ ಆದೇಶ ಹೊರಡಿಸಿದ ನಂತರ ಕರ್ತವ್ಯಕ್ಕೆ ಹಾಜರಾಗದೇ ಬಾಕಿ ಉಳಿದ ಸ್ಥಾನಗಳಿಗೆ ತಮ್ಮನ್ನು ಪರಿಗಣಿಸುವಂತೆ ಕೋರಿದ್ದಾರೆ. ಈ ಸಂಬಂಧ, ಕರ್ನಾಟಕ ಆಡಳಿತ ಮಂಡಳಿಯೂ ಸಹ ಅರ್ಜಿದಾರರ ಮನವಿಯನ್ನು ಪರಿಶೀಲಿಸಿ ಅರ್ಜಿಯಲ್ಲಿ ಕೋರಲಾದ ಅಂಶಗಳನ್ನು ನೇಮಕಾತಿ ನಿಯಮಾನುಸಾರ ಪರಿಗಣಿಸಲು ಅವಕಾಶವಿಲ್ಲವೆಂದು ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ. ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ ಆದೇಶದ ವಿರುದ್ಧ ಅರ್ಜಿದಾರರು ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ (ಎಸ್ ಕೆಎಟಿ)ಅನ್ನೂ ಸಹ ಸಲ್ಲಿಸಿದ್ದು, ಅರ್ಜಿಯನ್ನೂ ಸಹ ನ್ಯಾಯಾಲಯವು ಹಿಂದಿನ ಆದೇಶವನ್ನೇ ಎತ್ತಿ ಹಿಡಿದಿದೆ. ಕಳೆದ ಕೆಲ ವರ್ಷಗಳಿಂದ ಇವರು ಹೋರಾಡುತ್ತಿದ್ದು, ಇವರ ಪರ ನ್ಯಾಯ ಇದೆ ಎಂದು ಹೆಚ್ಚಿನ ಸದಸ್ಯರು ಹೇಳಿದ್ದರಿಂದ ಇನ್ನೊಮ್ಮೆ ಪರಿಶೀಲಿಸುತ್ತೇನೆ ಎಂದು ಭರವಸೆ ನೀಡಿದರು.