ಬೆಂಗಳೂರು: ಕೊರೊನಾ ಮೊದಲ ಅಲೆಯ ಬಳಿಕ, ಇದೀಗ ಎರಡನೇ ಅಲೆಯ ಆರ್ಭಟ ಶುರುವಾಗ್ತಿದೆ. ಆರೋಗ್ಯವನ್ನ ನೋಡಿಕೊಳ್ಳುವುದರ ಜೊತೆ ಜೊತೆಗೆ ಜೀವನೋಪಾಯಕ್ಕೆ ಬೇಕಾಗಿರುವ ಆರ್ಥಿಕ ಚಟುವಟಿಕೆಯ ಕಡೆಯು ಗಮನಕೊಡಬೇಕಿದೆ. ಸದ್ಯ ರಾಜ್ಯದಲ್ಲಿ ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದರ ನಿಯಂತ್ರಣಕ್ಕೆ ತಾಂತ್ರಿಕ ಸಲಹಾ ಸಮಿತಿ ಹಲವು ವಿಷಯಗಳನ್ನ ಶಿಫಾರಸು ಮಾಡಿದೆ.
ಕೊರೊನಾ ಸೋಂಕು ವ್ಯಾಪಕವಾಗಿ ಹರಡುವುದನ್ನ ತಡೆಯಲು ನಿರ್ಬಂಧಗಳನ್ನು ಹೇರಲೇಬೇಕಾಗಿದೆ. ಹೀಗಾಗಿ, ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿದ್ದು, ಹಲವು ಶಿಫಾರಸುಗಳನ್ನು ಸರ್ಕಾರದ ಮುಂದಿಟ್ಟಿದೆ. ಅದರಲ್ಲಿ ಮುಖ್ಯವಾಗಿ ತಾಂತ್ರಿಕ ಸಲಹಾ ಸಮಿತಿಯು ಲಾಕ್ ಡೌನ್ ಮತ್ತು ನೈಟ್ ಕರ್ಫ್ಯೂ ಬಿಟ್ಟು ಉಳಿದ ಕ್ರಮಗಳನ್ನ ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ತಿಳಿಸಿದೆಯಂತೆ. ಆರ್ಥಿಕ ಚಟುವಟಿಕೆಗಳಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಶೂಟಿಂಗ್ ವಿಶ್ವಕಪ್: ಮತ್ತಿಬ್ಬರು ಭಾರತೀಯ ಶೂಟರ್‌ಗಳಿಗೆ ಕೊರೊನಾ ದೃಢ
ಯಾಕೆಂದರೆ ಮೊದಲ ಅಲೆಯ ಹೊಡೆತದಿಂದ ಆರ್ಥಿಕ ಪರಿಸ್ಥಿತಿ ನೆಲಕಚ್ಚಿತ್ತು. ಮತ್ತೇ ಲಾಕ್ ಡೌನ್ ಜಾರಿ ಮಾಡುವುದರಿಂದ ಇನ್ನಷ್ಟು ಸಮಸ್ಯೆ ಹೆಚ್ಚಾಗಲಿದೆ ಹೊರತು ಕೊರೊನಾ ನಿಯಂತ್ರಣ ಅಸಾಧ್ಯವಾಗಲಿದೆ. ಹೀಗಾಗಿ, ಲಾಕ್ಡೌನ್, ನೈಟ್ ಕರ್ಫ್ಯೂ ಬೇಡ ಅಂತ ಶಿಫಾರಸು ಮಾಡಿರುವ ತಜ್ಞರ ಸಮಿತಿ ಮುಂದಿನ ತೀರ್ಮಾನವನ್ನ ಸರ್ಕಾರ ಮಾಡಲಿ ಎಂದಿದ್ದಾರೆ.
ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳೇನು?
- ಎರಡು ವಾರ ಶಾಲಾ-ಕಾಲೇಜುಗಳನ್ನ ಬಂದ್ ಮಾಡುವುದು.
- ಮುಖ್ಯವಾಗಿ ಯಾವುದೇ ಪ್ರತಿಭಟನೆಗೆ, ರ‍್ಯಾಲಿ, ಸಮಾವೇಶಕ್ಕೆ ಅವಕಾಶ ಕೊಡಬಾರದು.
- ಸಿನಿಮಾ ಥಿಯೇಟರ್ಗಳಲ್ಲಿ 50% ಸೀಟು ಭರ್ತಿಗೆ ಮಾತ್ರ ಅವಕಾಶ ಕಲ್ಪಿಸುವುದು.
- ಎಲ್ಲಾ ಜಿಮ್ ಗಳನ್ನ ತತ್‌ಕ್ಷಣದಿಂದ ಬಂದ್ ಮಾಡುವುದು.
- ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಓಪನ್ ಜಿಮ್ ಗಳನ್ನ ಕ್ಲೋಸ್ ಮಾಡಬೇಕು.
- ಅಪಾರ್ಟ್ಮೆಂಟ್ ಒಳಗಿನ ಪಾರ್ಟಿ ಹಾಲ್, ರೀಡಿಂಗ್ ರೂಮ್, ಕಾಮನ್ ಏರಿಯಾ, ಜಿಮ್, ಸ್ವಿಮ್ಮಿಂಗ್ ಪೂಲ್ ಕ್ಲೋಸ್ ಮಾಡಬೇಕು.
- ಒಳಾಂಗಣ ಕಾರ್ಯಕ್ರಮಗಳಾದರೆ ಕೇವಲ 100 ಜನಕ್ಕೆ ಸೀಮಿತ ಮಾಡಬೇಕು.
- ಹೊರಾಂಗಣ ಕಾರ್ಯಕ್ರಮಗಳಾದರೆ 200 ಜನಕ್ಕೆ ಸೀಮಿತಗೊಳಿಸಬೇಕೆಂದು ತಿಳಿಸಿದೆ.
ಹೀಗಾಗಿ ಇಷ್ಟೆಲ್ಲ ಅಂಶಕ್ಕೆ ಸರ್ಕಾರವು ಸಮ್ಮತಿ ಸೂಚಿಸಿ, ಕಟ್ಟುನಿಟ್ಟಿನ ನಿಯಂತ್ರಣ ಕ್ರಮವನ್ನ ಜಾರಿ ಮಾಡುತ್ತಾ ಎಂಬುದನ್ನು ಕಾದು ನೋಡಬೇಕು.