ಬೆಂಗಳೂರು:ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 4,299 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಹುದ್ದೆಗಳನ್ನು ಜುಲೈ 1 ರಿಂದ ಅಕ್ಟೋಬರ್ ಒಳಗೆ ಭರ್ತಿ ಮಾಡುವಂತೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಶಿಫಾರಸು ಮಾಡಿದೆ.
ರಾಜ್ಯದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವ ಕುರಿತಂತೆ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠಕ್ಕೆ ಕೆಎಸ್ಎಲ್ಎಸ್ಎ ಸಲ್ಲಿಸಿರುವ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ ಶೆಟ್ಟಿ ಈ ವರದಿ ಸಲ್ಲಿಸಿದ್ದಾರೆ.
ವರದಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೀಡಿರುವ ಮಾಹಿತಿಯಂತೆ ರಾಜ್ಯದಲ್ಲಿ 1,488 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 2,811 ಅಂಗನವಾಡಿ ಸಹಾಯಕಿಯರ ಹುದ್ದೆಗಳು ಖಾಲಿ ಇವೆ. ಹುದ್ದೆಗಳು ಖಾಲಿ ಇರುವುದು ಅಪೌಷ್ಠಿಕತೆ ನಿವಾರಣೆ ಮತ್ತು ನಿರ್ವಹಣೆ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಖಾಲಿ ಹುದ್ದೆಗಳ ನೇಮಕಾತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. 2021ರ ಜುಲೈ 1 ರಿಂದ ಪ್ರಾರಂಭಿಸಿ ಅಕ್ಟೋಬರ್ ಮುಗಿಯುವ ಮುನ್ನ ನೇಮಕಾತಿ ಮುಗಿಸುವುದು ಸೂಕ್ತ ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.
ಜಿಲ್ಲಾಧಿಕಾರಿಗಳ ನೇತೃತ್ವದ ಅಯ್ಕೆ ಸಮಿತಿ ಜುಲೈ ತಿಂಗಳಲ್ಲಿ ಅರ್ಜಿ ಆಹ್ವಾನಿಸಿ, ಆಗಸ್ಟ್ನಲ್ಲಿ ಅಯ್ಕೆ ಪ್ರಕ್ರಿಯೆ ನಡೆಸಬೇಕು. ಸೆಪ್ಟೆಂಬರ್ 15 ರೊಳಗೆ ತಾತ್ಕಾಲಿಕ ಪಟ್ಟಿ ಬಿಡುಗಡೆ ಮಾಡಿ ಅಕ್ಷೇಪಣೆಗಳನ್ನು ಆಹ್ವಾನಿಸಿ, ಅಕ್ಟೋಬರ್ 10ರೊಳಗೆ ಅಂತಿಮ ಪಟ್ಟಿ ಪ್ರಕಟಿಸಬೇಕು. ಅಕ್ಟೋಬರ್ 30ರೊಳಗೆ ನೇಮಕಾತಿ ಅದೇಶಗಳನ್ನು ನೀಡುವುದು ಸೂಕ್ತ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ.
ಓದಿ:ರಾಯ್ ಡಿಸೋಜಾ ಸಾವು ಪ್ರಕರಣ: 8 ಪೊಲೀಸರನ್ನು ಅಮಾನತುಗೊಳಿಸಿ ಐಜಿಪಿ ಆದೇಶ