ಬೆಂಗಳೂರು: ಗಾಂಧಿ ಜಯಂತಿ ಸೇರಿದಂತೆ ಎಲ್ಲ ಗಣ್ಯರ ಜಯಂತಿಗಳಿಗೆ ಶಾಲಾ-ಕಾಲೇಜುಗಳಿಗೆ ರಜೆ ನೀಡುವುದರ ಬದಲು, ಅರ್ಥಪೂರ್ಣ ಆಚರಣೆಗೆ ಸರ್ಕಾರದ ಶಿಕ್ಷಣ ಸುಧಾರಣೆ ಸಲಹೆಗಾರ ಪ್ರೊ. ಎಂ.ಆರ್. ದೊರೆಸ್ವಾಮಿ ಶಿಫಾರಸು ಮಾಡಿದ್ದಾರೆ.
ಉನ್ನತ ಶಿಕ್ಷಣ ಪರಿಷತ್ನಲ್ಲಿ ನಡೆದ ಸಭೆ ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪರಿಷತ್ನಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರೊಂದಿಗೆ ಮಾತುಕತೆ ನಡೆಸಿದ್ರು. ಸಭೆಯಲ್ಲಿ 7 ಪ್ರಮುಖ ಶಿಫಾರಸುಗಳ ವರದಿಯನ್ನು ಸಲ್ಲಿಸಿದರು. ರಜೆ ನೀಡುವುದರ ಬದಲು, ಅಂದು ಅಂತಹ ಗಣ್ಯ ವ್ಯಕ್ತಿಗಳ ಬಗ್ಗೆ ಉಪನ್ಯಾಸ- ಕಾರ್ಯಾಗಾರವನ್ನು ಆಯೋಜಿಸಬೇಕು. ಆ ಮೂಲಕ ಇಂದಿನ ಪೀಳಿಗೆಯನ್ನು ಜಾಗೃತರನ್ನಾಗಿಸಬಹುದು. ಇದರಿಂದ ಜಯಂತಿಗಳಿಗೆ ನಿಜವಾದ ಅರ್ಥ ಬರಲಿದೆ ಎಂದು ಪ್ರೊ.ದೊರೆಸ್ವಾಮಿ ಸಲಹೆ ನೀಡಿದರು.
ಕೋವಿಡ್ -19ರ ನಂತರದ ಸಮಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಮೊದಲಿನ ಸ್ಥಿತಿಗೆ ತರುವುದು ದೊಡ್ಡ ಸವಾಲಾಗಿದೆ. ಹೀಗಾಗಿ ನಾವು ಕೆಲ ತ್ಯಾಗಗಳನ್ನು ಮಾಡಲೇಬೇಕಾಗಿದೆ ಎಂದರು. ಶೈಕ್ಷಣಿಕ ವರ್ಷವನ್ನು ಸಮರ್ಪಕವಾಗಿ ಪೂರೈಸಬೇಕು. ಸಮಯದ ಸದ್ಭಳಕೆ ಬಹಳ ಮುಖ್ಯ. ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಲು ಬೋಧನಾ ಅವಧಿಯನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಈ ಶಿಫಾರಸಿನ ವಿವಿಧ ಅಂಶಗಳ ಬಗ್ಗೆ ಚರ್ಚೆ ನಡೆಸಿದ ಅಶ್ವತ್ಥನಾರಾಯಣ, ಜಯಂತಿಗಳ ರಜೆ ವಿಚಾರದಲ್ಲಿ ನಿರ್ಧಾರವನ್ನು ಮುಖ್ಯಮಂತ್ರಿಗಳೇ ಕೈಗೊಳ್ಳಬೇಕು ಎಂದರು.
ಶಿಫಾರಸಿನಲ್ಲಿ ಏನೆಲ್ಲ ಇದೆ?:
- ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಆದಷ್ಟು ಬೇಗ ಮಾಡಬೇಕು. ವಿದ್ಯಾರ್ಥಿಗಳ ಪಾಲಿಗೆ ಅಂತಿಮ ಸೆಮಿಸ್ಟರ್ ಬಹಳ ಮುಖ್ಯ. ಈಗಾಗಲೇ ಬಹುತೇಕ ವಿದ್ಯಾರ್ಥಿಗಳು ವಿವಿಧೆಡೆಯಲ್ಲಿ ಉದ್ಯೋಗಕ್ಕಾಗಿ ಆಯ್ಕೆಯಾಗಿದ್ದು, ಅವರಿಗೀಗ ಉತ್ತೀರ್ಣತೆಯ ಪ್ರಮಾಣ ಪತ್ರ ಬೇಕು. ಹೀಗಾಗಿ ಆದಷ್ಟು ಬೇಗ ಪರೀಕ್ಷೆಯನ್ನು ಮುಗಿಸಬೇಕು.
- ಸರ್ಕಾರಿ, ಖಾಸಗಿ ಸೇರಿದಂತೆ ರಾಜ್ಯದಲ್ಲಿರುವ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಬಾಕಿ ಉಳಿದಿರುವ ಪರೀಕ್ಷೆಗಳನ್ನು ನಡೆಸಬೇಕು. ಈ ಪರೀಕ್ಷೆಗಳ ಮಹತ್ವವನ್ನು ಕಡೆಗಣಿಸಬಾರದು.
- ಉನ್ನತ ಶಿಕ್ಷಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಮಗ್ರ ಮಾರ್ಗದರ್ಶನ ನೀಡುವ ವ್ಯವಸ್ಥೆಯನ್ನು ರೂಪಿಸಬೇಕು.
- ವಿಶೇಷಚೇತನ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಬೇಕು.
- ಆರು ಜಿಲ್ಲೆಗಳನ್ನು ಒಳಗೊಂಡಿರುವ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣವನ್ನು ಸುಧಾರಿಸಲು 'ವಿಶೇಷ ಶಿಕ್ಷಣ ನೀತಿ’ಯನ್ನು ರೂಪಿಸಬೇಕು. ಜತೆಗೆ ಆ ಭಾಗದಲ್ಲಿ ಹೆಚ್ಚಾಗಿ ಕೌಶಾಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು. ಜಾಗತಿಕ ಭಾಷಾ ಕಲಿಕಾ ಕೇಂದ್ರಗಳನ್ನು ತೆರೆಯಬೇಕು. ಶಿಕ್ಷಕರ ಅಕಾಡೆಮಿ ಮತ್ತು ಕ್ರೀಡಾ ಅಕಾಡೆಮಿ ಸ್ಥಾಪನೆ ಮಾಡಬೇಕು.
ಶಿಫಾರಸುಗಳ ಬಗ್ಗೆ ಚರ್ಚೆ:
ಶಿಫಾರಸುಗಳ ಬಗ್ಗೆ ಮಾತನಾಡಿದ ಡಿಸಿಎಂ, ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಇವು ಅತ್ಯಂತ ಮಹತ್ವದ ಹಾಗೂ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಹೊಸ ದಿಕ್ಕು ನೀಡುವ ಶಿಫಾರಸುಗಳಾಗಿವೆ. ಇವುಗಳ ಜಾರಿಗೆ ಪ್ರಯತ್ನಿಸಲಾಗುವುದು ಎಂದರು. ಸಮಿತಿ ಮಾಡಿರುವ ಶಿಫಾರಸುಗಳ ಕೆಲ ಅಂಶಗಳನ್ನು ಈಗಾಗಲೇ ಜಾರಿ ಮಾಡಲಾಗಿದೆ. ಅವುಗಳನ್ನು ಮತ್ತಷ್ಟು ಉತ್ತಮಪಡಿಸಲಾಗುವುದು ಎಂದು ಡಿಸಿಎಂ ತಿಳಿಸಿದರು.