ಬೆಂಗಳೂರು: ಮುಂಬೈಗೆ ತೆರಳಿದ ಅತೃಪ್ತ ಶಾಸಕರ ಪೈಕಿ ಆರು ಮಂದಿ ಕಳೆದ ರಾತ್ರಿ ನಗರಕ್ಕೆ ವಾಪಸಾಗಿದ್ದಾರೆ. ತಡರಾತ್ರಿ 12.20 ಕ್ಕೆ ಶಾಸಕರು ಮುಂಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು ಅಲ್ಲಿಂದ ತಮ್ಮ ತಮ್ಮ ನಿವಾಸಗಳಿಗೆ ತೆರಳಿದ್ದಾರೆ. ಅತೃಪ್ತ ಶಾಸಕರ ಮುಂದಿನ ನಡೆ ಏನೆಂಬುದು ಸ್ಪಷ್ಟವಾಗಿಲ್ಲ.
ಶಾಸಕರಾದ ಭೈರತಿ ಬಸವರಾಜ್, ಮುನಿರತ್ನ, ಎಸ್ ಟಿ ಸೋಮಶೇಖರ್, ಶಿವರಾಮ ಹೆಬ್ಬಾರ್, ಎಂಟಿಬಿ ನಾಗರಾಜ್ ಹಾಗೂ ಪಕ್ಷೇತರ ಶಾಸಕ ಎಚ್. ನಾಗೇಶ್ ವಾಪಸಾಗಿರುವ ಶಾಸಕರು.
ಮುಂಬೈನಿಂದ ಬೆಂಗಳೂರಿಗೆ ಬಂದ ಅತೃತ್ತರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಶೇಷ ಪೊಲೀಸ್ ಸುರಕ್ಷತೆಯಲ್ಲಿ ನಗರಕ್ಕೆ ಕರೆದುಕೊಂಡು ಬರಲಾಗಿದೆ. ಒಂದು ಮೂಲದ ಪ್ರಕಾರ ಇವರು ತಮ್ಮ ನಿವಾಸಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಇದ್ದರೆ ಇನ್ನೂ ಕೆಲ ಮೂಲಗಳು ಈ ಆರು ಮಂದಿ ಶಾಸಕರು ಒಂದೇಕಡೆ ನೆಲೆಸಿದ್ದಾರೆ ಎಂದು ತಿಳಿಸಿವೆ.
ಮಂಗಳವಾರದ ಹೊತ್ತಿಗೆ ಉಳಿದೆಲ್ಲ ಶಾಸಕರು ನಗರಕ್ಕೆ ಬರುವ ಸಾಧ್ಯತೆ ಇದ್ದು, ಬುಧವಾರ ಶಾಸಕರು ಒಟ್ಟಾಗಿ ಸುದ್ದಿಗೋಷ್ಠಿ ನಡೆಸಬಹುದು. ಬಿಜೆಪಿ ಹಿರಿಯ ಮುಖಂಡ ಆರ್ ಅಶೋಕ್ ಅವರೊಂದಿಗೆ ಇವರೆಲ್ಲರೂ ಹಿಂದಿರುಗಿದ್ದು ಬಿಜೆಪಿ ವಿಶೇಷ ನಿಗಾದಲ್ಲಿ ಇದ್ದಾರೆ ಎನ್ನಲಾಗಿದೆ.
ಮತ್ತೋರ್ವ ಅತೃಪ್ತ ಶಾಸಕ ಪ್ರತಾಪಗೌಡ ಪಾಟೀಲ ಹುಬ್ಬಳಿಯಲ್ಲಿದ್ದು, ಇಂದು ರಾತ್ರಿ ಮುಂಬೈಗೆ ತೆರಳಲಿದ್ದಾರೆಂಬ ಮಾಹಿತಿ ಇದೆ. ಸುಪ್ರೀಂ ಕೋರ್ಟ್ ತೀರ್ಪು ನೋಡಿಕೊಂಡು, ಬುಧವಾರ ಸುದ್ದಿಗೋಷ್ಠಿ ಮಾಡಿ, ತಮ್ಮ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸಲಿದ್ದು, ಉಪ ಚುನಾವಣೆ ಎದುರಿಸಲು ಸಿದ್ಧತೆ ಕೈಗೊಳ್ಳಲಿದ್ದಾರೆ ಎಂಬ ಮಾಹಿತಿಯೂ ಇದೆ. ಇನ್ನು ಪ್ರತಾಪ ಗೌಡ ಪಾಟೀಲ್ ನಾಳೆ ಮುಂಬೈಯಿಂದ ದೆಹಲಿಗೆ ಹೋಗ್ತಾರಂತೆ. ವಿಶ್ವನಾಥ್, ರಮೇಶ್ ಜಾರಕಿಹೊಳಿ ಸೇರಿ ನಾಳೆ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಲಿದ್ದಾರೆ ಎಂಬ ಮಾಹಿತಿ ಇದೆ.