ಬೆಂಗಳೂರು: ಪಕ್ಷದ್ರೋಹ ಆರೋಪದ ಹಿನ್ನೆಲೆ ಅನರ್ಹಗೊಂಡಿರುವ ಶಾಸಕ ರಮೇಶ ಜಾರಕಿಹೊಳಿ ಮತ್ತು ಶ್ರೀಮಂತ್ ಪಾಟೀಲ್ ಅವರು ಮುಂಬೈನಿಂದ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ.
22 ದಿನಗಳ ಹಿಂದೆ ಮುಂಬೈಗೆ ಹಾರಿದ್ದ ರಮೇಶ ಜಾರಕಿಹೋಳಿ ಇಂದು ಬೆಂಗಳೂರಿಗೆ ಆಗಮಿಸಿದ್ದಾರೆ. ಅತೃಪ್ತರೆಲ್ಲಾ ಇಂದು ಸಭೆ ನಡೆಸುವ ಹಿನ್ನೆಲೆಯಲ್ಲಿ ಮುಂಬೈನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ಸಭೆಯಲ್ಲಿ ಮುಂದಿನ ನಡೆ ಏನು? ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕುವುದೋ ಬೇಡವೋ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅನರ್ಹ ಶಾಸಕರು ಇದೇ ವೇಳೆ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಅನರ್ಹ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿದ್ದು, ಅನರ್ಹತೆ ಬಗ್ಗೆ ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಹಿಂದಿನ ಪ್ರಕರಣಗಳಿಗೂ ನಮಗೂ ಸಂಬಂಧವಿಲ್ಲ. ಅದಕ್ಕೂ ಈ ಪ್ರಕರಣಕ್ಕೂ ತಾಳೆ ಹಾಕಬೇಡಿ. ನಾವು ರಾಜೀನಾಮೆ ಕೊಟ್ಟಿದ್ದೇವೆ. ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಗೋ ಭರವಸೆ ಇದೆ. ನಮ್ಮ ಗುರುಗಳಾದ ಎಸ್.ಎಂ.ಕೃಷ್ಣರನ್ನು ಭೇಟಿ ಮಾಡಲು ತೆರಳುತ್ತಿದ್ದೇನೆ. ಶೀಘ್ರದಲ್ಲೇ 15 ಶಾಸಕರು ಒಟ್ಟಿಗೆ ಸೇರಿ ಸುದ್ದಿಗೋಷ್ಠಿ ನಡೆಸುತ್ತೇವೆ ಎಂದರು.
ಇನ್ನು ಶ್ರೀಮಂತ ಪಾಟೀಲ್ ಕೂಡ ಅನಾರೋಗ್ಯದ ಹಿನ್ನೆಲೆ ಕಳೆದ ಹತ್ತು ದಿನಗಳ ಹಿಂದೆ ಮುಂಬೈಗೆ ತೆರಳಿದ್ದರು. ಬಳಿಕ ಆಸ್ಪತ್ರೆಯಲ್ಲಿದ್ದ ಫೋಟೋಗಳನ್ನು ಕಳುಹಿಸಿದ್ದರು. ಅಧಿವೇಶನಕ್ಕೆ ಆಗಮಿಸದ ಹಿನ್ನೆಲೆ ಶ್ರೀಮಂತ ಪಾಟೀಲ್ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದರು.