ಬೆಂಗಳೂರು: ಹೊಸಕೋಟೆ ಅಭ್ಯರ್ಥಿ ಆಯ್ಕೆ ಸಂಬಂಧ ಬಿಜೆಪಿಯಲ್ಲಿನ ಗೊಂದಲ ಪರಿಹಾರವಾಗಿಲ್ಲ. ಇದರ ಮಧ್ಯೆ ನಾನು ನನ್ನ ಕೆಲಸ ಮಾಡಿಕೊಂಡಿದ್ದೇನೆ ಎಂದು ಚುನಾವಣಾ ತಯಾರಿಯಲ್ಲಿರುವ ಅನರ್ಹ ಶಾಸಕ ಎಂ.ಟಿ.ಬಿ ನಾಗರಾಜ್ ಹೇಳಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿ, ಕೋರ್ಟ್ ವಿಚಾರಣೆ ಹಾಗೂ ಕ್ಷೇತ್ರದಲ್ಲಿನ ಬಿಜೆಪಿ ಕಾರ್ಯಕರ್ತರ ವಿರೋಧ ಸಂಬಂಧ ಸಿಎಂ ಜೊತೆ ಮಾತುಕತೆ ನಡೆಸಿದ ಬಳಿಕ ಅವರು ಮಾತನಾಡಿದರು. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಸ್ಪರ್ಧೆಗೆ ಯತ್ನಿಸುತ್ತಿದ್ದಾರೆ, ಆದರೆ ಈ ಕ್ಷಣದವರೆಗೂ ಗೊಂದಲ ಬಗೆಹರಿದಿಲ್ಲ. ನಮ್ಮ ಕೆಲಸವನ್ನು ನಾವು ಮಾಡ್ತಿದ್ದೀವಿ, ಸ್ವತಂತ್ರ ಅಭ್ಯರ್ಥಿಗಳು ಅವರ ಕೆಲಸ ಮಾಡ್ತಿದ್ದಾರೆ. ಕೋರ್ಟ್ನಲ್ಲಿ ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸ ಇದೆ. ತೀರ್ಪು ಏನೇ ಬಂದರೂ ಅದಕ್ಕೆ ತಲೆ ಬಾಗುತ್ತೇವೆ ಎಂದರು.
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಇನ್ನು, ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಮೇಲೆ ನಡೆದ ಹಲ್ಲೆ ಬಗ್ಗೆ ಅವರು ಈಗಾಗಲೇ ಸ್ಪಷ್ಟನೆ ಕೊಟ್ಟಿದ್ದಾರೆ. ಚಾಕು ಹಾಕಲು ಬಂದಿದ್ದ ಹುಡುಗ ಯಾರು, ಯಾಕೆ ಚಾಕು ಹಾಕಲು ಯತ್ನಿಸಿದ ಎಂಬುದರ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಅದು ರಾಜಕೀಯ ಪ್ರೇರಿತ ಅಲ್ಲವೆಂದೂ ತಿಳಿಸಿದ್ದಾರೆ. ಏನೋ ಅವರಿಗೆ ಅನುಕೂಲ ಆಗಲಿಕ್ಕೆ ಈ ರೀತಿ ಮಾಡಿದ್ದಾನೆ ಅಷ್ಟೇ. ಆ ಹುಡುಗ ಅದೇ ಊರಿನವನು, ಅವರಪ್ಪ ಶ್ರೀಕಂಠಚಾರಿ ನಮಗೆ ನಾಟಕದ ಮೇಷ್ಟ್ರು. 1975 ರಿಂದ 80 ವರೆಗೆ ನಮಗೆ ನಾಟಕ ಹೇಳಿಕೊಟ್ಟಿದ್ದರು. ಅವರು ತುಂಬಾ ಬಡವರು, ಆ ಹುಡುಗನು ಚಾಕು ತಂದಿದ್ದ ಅಂತಾ ಹೇಳಿದ್ದಾರೆ. ಅದು ಎಷ್ಟು ಸತ್ಯ ಅಂತಾ ಹೇಳಿದವರಿಗೆ ಗೊತ್ತು, ನೋಡಿದವರಿಗೆ ಗೊತ್ತು ಎಂದು ಎಂಟಿಬಿ ಹೇಳಿದ್ರು.
ಅನರ್ಹ ಶಾಸಕರು ಕರೆದ ಕಾರ್ಯಕ್ರಮಗಳಿಗೆಲ್ಲಾ ಓಕೆ ಎನ್ನುತ್ತಿರುವ ಸಿಎಂ:
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಬಂದು ಹೋದ ಬಳಿಕ, ಅವರು ಕರೆದ ಕಾರ್ಯಕ್ರಮಕ್ಕೆ ಸಿಎಂ ಒಪ್ಪಿದ್ದಾರೆ. ಹೊಸಕೋಟೆಯ ಕಾಟಂನಲ್ಲೂರು ಕಾರ್ಯಕ್ರಮಕ್ಕೆ ಬರುವಂತೆ ಎಂಟಿಬಿ ನಾಗರಾಜ್ ಆಹ್ವಾನಿಸಿದರು. ಬ್ಯಾಂಕ್ ಆಫ್ ಬರೋಡಾ ವತಿಯಿಂದ ನಡೆಯುತ್ತಿರುವ ಮೆಗಾ ಕಿಸಾನ್ ಮೇಳಾ ಉದ್ಘಾಟನಾ ಕಾರ್ಯಕ್ರಮ ನಾಳೆ ಮಧ್ಯಾಹ್ನ 2.30ಕ್ಕೆ ಕಾಟಂನಲ್ಲೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರದಲ್ಲಿ ಪಾಲ್ಗೊಳ್ಳಲು ಸಿಎಂ ಒಪ್ಪಿದ್ದಾರೆ. ಈ ಮೂಲಕ ಅನರ್ಹರು ಕರೆದ ಕಾರ್ಯಕ್ರಮಗಳಿಗೆಲ್ಲಾ ಹೋಗಲು ಸಿಂ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.