ಬೆಂಗಳೂರು: ಸ್ಥಳೀಯ ಕಾರ್ಯಕರ್ತರ ವಿರೋಧ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಆತಂಕಕ್ಕೆ ಸಿಲುಕಿದ ಅನರ್ಹ ಶಾಸಕರು ಬಿಜೆಪಿ ಕಚೇರಿಗೆ ದೌಡಾಯಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಈಗಾಗಲೇ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಅನರ್ಹ ಶಾಸಕರನ್ನು ಕೈ ಬಿಡಲ್ಲ ಎಂದು ಹೇಳಿದ್ದರೂ ಎರಡನೇ ಬಾರಿಗೆ ಪಕ್ಷದ ಕಚೇರಿಗೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿ ನಗರ,ಕೆ.ಆರ್.ಪುರಂಗಳಲ್ಲಿ ಅನರ್ಹ ಶಾಸಕರು ಬಿಜೆಪಿ ಸೇರ್ಪಡೆಗೆ ಸ್ಥಳೀಯ ಮಟ್ಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಆತಂಕಗೊಂಡು ಪರಿಸ್ಥಿತಿ ತಿಳಿಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅನರ್ಹರ ಮನವಿ ಆಲಿಸಿದ ಕಟೀಲ್ ಸ್ಥಳೀಯ ಮಟ್ಟದಲ್ಲಿ ಅಸಮಧಾನ ಸಹಜ, ಸೂಕ್ತ ಸಮಯಕ್ಕೆ ನಿರ್ಧಾರ ಕೈಗೊಳ್ಳಲಾಗುತ್ತದೆ ಯಾವ ಕಾರಣಕ್ಕೂ ನಿಮಗೆ ಅನ್ಯಾಯವಾಗಲು ಬಿಡಲ್ಲ ಚಿಂತಿಸದಿರಿ ಎಂದು ಅಭಯ ನೀಡಿ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೇಯರ್ ಅಭ್ಯರ್ಥಿ ಆಯ್ಕೆ ವೇಳೆಯೂ ಸರಿ ರಾತ್ರಿ ಬಿಜೆಪಿ ಕಚೇರಿಗೆ ಆಗಮಿಸಿ ಕಟೀಲ್ ಜೊತೆ ಮಾತುಕತೆ ನಡೆಸಿದ್ದ ಅನರ್ಹ ಶಾಸಕರು ಇಂದು ಮತ್ತೊಮ್ಮೆ ಭೇಟಿ ಮಾಡಿ ಚರ್ಚೆ ನಡೆಸಿರುವುದು ಅನರ್ಹ ಆತಂಕ ಹೆಚ್ಚಾಗಿರುವ ಸುಳಿವು ನೀಡಿದೆ.