ಕನ್ನಡ ಚಿತ್ರರಂಗ 90 ವರ್ಷಗಳನ್ನು ಪೂರೈಸಿದೆ. ಕನ್ನಡ ಚಿತ್ರರಂಗ ಇಂದು ವಿಶ್ವಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ವರ್ಷವೊಂದಕ್ಕೆ ನೂರಾರು ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತಿವೆ. ಸಾವಿರಾರು ಕೋಟಿ ಮಾರುಕಟ್ಟೆ ಮೌಲ್ಯವುಳ್ಳ ಚಿತ್ರರಂಗವಾಗಿ ಸ್ಯಾಂಡಲ್ವುಡ್ ಬೆಳೆದು ನಿಂತಿದೆ. ವಿಪರ್ಯಾಸವೆಂದರೆ ರಾಜ್ಯದಲ್ಲಿ ಅನೇಕ ಸರ್ಕಾರಗಳು ಬಂದು ಹೋದರೂ ಕರ್ನಾಟಕದಲ್ಲಿ ಒಂದು ಫಿಲ್ಮ್ ಸಿಟಿ ನಿರ್ಮಿಸಲು ಸಾಧ್ಯವಾಗಿಲ್ಲ.
ಇಂದಿಗೂ ನಮ್ಮವರು ಪಕ್ಕದ ರಾಜ್ಯ ತೆಲಂಗಾಣದಲ್ಲಿರುವ ರಾಮೋಜಿರಾವ್ ಫಿಲ್ಮ್ ಸಿಟಿಯನ್ನೇ ಅವಲಂಬಿಸಿದ್ದೇವೆ. ಇದಕ್ಕೆ ಕನ್ನಡ ಚಿತ್ರರಂಗದಲ್ಲಿನ ನಾಯಕತ್ವದ ಕೊರತೆ ಒಂದು ಕಾರಣವಾದರೆ, ಸರ್ಕಾರದ ಅಸಡ್ಡೆ ಮನೋಭಾವ ಇನ್ನೊಂದು ಕಾರಣ ಎಂಬುದರಲ್ಲಿ ಯಾವುದೇ ಅನುಮಾನವೂ ಇಲ್ಲ. ಕ್ರೇಜಿ ಸ್ಟಾರ್ ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಫಿಲ್ಮ್ ಸಿಟಿ ನಿರ್ಮಾಣ ಮಾಡಬೇಕೆಂಬ ಮನವಿ ಪತ್ರವನ್ನ ಹಿಂದೆ ಅನೇಕ ಬಾರಿ ಸರ್ಕಾರಗಳಿಗೆ ಸಲ್ಲಿಸಿದ್ದರು. ರೂಪು -ರೇಷೆಯನ್ನು ಸಿದ್ಧಪಡಿಸಿ ಕೊಟ್ಟಿದ್ದರು.
ಕಾಲ ಕಾಲಕ್ಕೆ ಸರ್ಕಾರಗಳೂ ಬದಲಾದವೇ ಹೊರತು ರವಿಚಂದ್ರನ್ ಮನವಿಗೆ ಮನ್ನಣೆ ಸಿಗಲಿಲ್ಲ. ಹೀಗಾಗಿಯೇ ಬಳಲಿ, ಬೇಸತ್ತು ಹೋದ ರವಿಚಂದ್ರನ್ ಈಗ ಫಿಲ್ಮ್ ಸಿಟಿಯ ಬಗ್ಗೆ ಮಾತನಾಡುವುದನ್ನೇ ಬಿಟ್ಟಿದ್ದಾರೆ. ರವಿಚಂದ್ರನ್ಗೂ ಮುನ್ನ ಇಂಥಹದ್ದೊಂದು ಕನಸನ್ನ ಶಂಕರ್ ನಾಗ್ ಕಂಡಿದ್ದರು. ಆದರೆ, ಶಂಕರ್ ನಾಗ್ ಅವರ ಅಕಾಲಿಕ ಅಗಲಿಕೆಯ ಜೊತೆಯಲ್ಲಿ ಆ ಕನಸು ಕೂಡ ಕಮರಿ ಹೋಯ್ತು.
2013ರಲ್ಲಿ ಮೊದಲ ಬಾರಿಗೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಚಲನಚಿತ್ರ ನಗರಿ ನಿರ್ಮಾಣ ಮಾಡಲು ಸಮ್ಮತಿಸಿದ್ದರು. ಹಣಕಾಸು ಸಚಿವರು ಕೂಡ ಆಗಿದ್ದ ಸಿದ್ಧರಾಮಯ್ಯ ಬಜೆಟ್ನಲ್ಲಿ 116 ಎಕರೆ ಭೂಮಿಯನ್ನೂ ಮಂಜೂರು ಮಾಡಿದ್ದರು. ಮೈಸೂರಿನ ತಮ್ಮ ವರುಣ ಕ್ಷೇತ್ರದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು. ಆದರೆ, ಆ ಘೋಷಣೆ ಕೇವಲ ಘೋಷಣೆಯಾಗಿಯೇ ಉಳಿಯಿತು.
2018ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಹೆಚ್.ಡಿ.ಕುಮಾರಸ್ವಾಮಿ ಫಿಲ್ಮ್ ಸಿಟಿ ನಿರ್ಮಾಣವನ್ನು ಮೈಸೂರಿನಿಂದ ರಾಮನಗರಕ್ಕೆ ಸ್ಥಳಾಂ ತರಿಸಿದ್ದರು. ರಾಮನಗರದಲ್ಲಿಯೇ 500 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಫಿಲ್ಮ್ ಸಿಟಿ ನಿರ್ಮಾಣ ಮಾಡುವ ಭರವಸೆಯನ್ನ ನೀಡಿದ್ದರು. ಇದಕ್ಕಾಗಿ 40 ಕೋಟಿ ರೂಪಾಯಿ ಅನುದಾನವನ್ನೂ ಕೂಡ ಬಿಡುಗಡೆ ಮಾಡಿದ್ದರು. ಆದರೆ ಇಲ್ಲಿಯೂ ರಾಜಕಾರಣ ಆರಂಭವಾಯಿತು. ಮೈಸೂರಿನಿಂದ ರಾಮನಗರಕ್ಕೆ ಫಿಲ್ಮ್ ಸಿಟಿಯನ್ನ ವರ್ಗಾವಣೆ ಮಾಡಿದ್ದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದರು.
ಮೈಸೂರು ಹಾಗೂ ಸುತ್ತಮುತ್ತಲಿನ ತಾಣ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಸೇರಿದಂತೆ ಹಲವಾರು ಭಾಷೆಗಳ ಚಿತ್ರ ನಿರ್ಮಾಪಕರ ನೆಚ್ಚಿನ ತಾಣ. ಇಲ್ಲಿನ ಸುತ್ತಮುತ್ತಲಿನ ಪರಿಸರ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದಂತಿದೆ, 16 ಅರಮನೆಗಳು, 250ಕ್ಕೂ ಹೆಚ್ಚು ಲೊಕೇಷನ್‌ಗಳು, ನದಿ, ನಾಲೆ, ಕಾಲುವೆ, ಬೆಟ್ಟಗುಡ್ಡಗಳೊಂದಿಗೆ ಚಿತ್ರೀಕರಣಕ್ಕೆ ಉತ್ತಮ ತಾಣವಾಗಿದೆ. ಇದೀಗ ವಿಮಾನ ಸೌಲಭ್ಯವೂ ಇದೆ. ಇದೆಲ್ಲದಕ್ಕಿಂತ ಮೈಸೂರಿನಲ್ಲಿಯೇ ಚಿತ್ರನಗರಿ ಸ್ಥಾಪನೆಯಾಗಬೇಕು ಎಂದು ದಿ. ಡಾ. ರಾಜಕುಮಾರ್ ಕನಸು ಕಂಡಿದ್ದರು. ಹಾಗಿರುವಾಗ ಮೈಸೂರಿನಿಂದ ರಾಮನಗರಕ್ಕೆ ಚಿತ್ರನಗರಿ ವರ್ಗ ಮಾಡಿರುವುದು ಸಮಂಜಸವಲ್ಲ ಎಂದು ಪತ್ರವನ್ನೂ ಬರೆದು ಅಸಮಾಧಾನವನ್ನೂ ಹೊರ ಹಾಕಿದ್ದರು.