ಬೆಂಗಳೂರು: ರೈತರ ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಮತ್ತು ಸಾಂಸಾರಿಕ ಸಮಸ್ಯೆಗಳು, ಸಾಮರ್ಥ್ಯ ಮೀರಿ ಸಾಲ, ಬೆಳೆ ನಷ್ಟ ಮುಂತಾದವು ರೈತರ ಆತ್ಮಹತ್ಯೆಗೆ ಕಾರಣಗಳು ಎಂದು ರೈತರ ಆತ್ಮಹತ್ಯೆ ಕುರಿತು ಅಧ್ಯಯನ ನಡೆಸಿದ ಸಮಿತಿಯೊಂದು ವರದಿಯಲ್ಲಿ ಹೇಳಿದೆ. ರಾಜ್ಯ ಸರ್ಕಾರ 2001ರಲ್ಲಿ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪ ಕುಲಪತಿ ಡಾ ಜಿ ಕೆ ವೀರೇಶ್ ಅವರ ಅಧ್ಯಕ್ಷತೆಯಲ್ಲಿ ರೈತರ ಆತ್ಮಹತ್ಯೆ ಕುರಿತು ಅಧ್ಯಯನ ನಡೆಸಲು ಸಮಿತಿ ರಚಿಸಿತ್ತು.
ರಾಜ್ಯದಲ್ಲಿ 2019-20 ಸಾಲಿನಲ್ಲಿ 1091, 2020-21 ಸಾಲಿನಲ್ಲಿ 851 ಹಾಗೂ 2021-22 ನೇ ಸಾಲಿನಲ್ಲಿ 859 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಒಟ್ಟು 2,801 ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದೆ.
2019-20ನೇ ಸಾಲಿನಲ್ಲಿ ವರದಿಯಾದ ಒಟ್ಟು 1091 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಉಪವಿಭಾಗ ಮಟ್ಟದ ಸಮಿತಿ ಸಭೆಯಲ್ಲಿ 196 ಪ್ರಕರಣಗಳು ತಿರಸ್ಕೃತಗೊಂಡಿವೆ. 895 ಪ್ರಕರಣಗಳು ಅರ್ಹ ಪ್ರಕರಣಗಳೆಂದು ತೀರ್ಮಾನಿಸಲಾಗಿದ್ದು, 895 ಅರ್ಹ ಪ್ರಕರಣಗಳಿಗೆ ಪರಿಹಾರ ಧನವನ್ನು ವಿತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
2020-21ರ ಸಾಲಿನಲ್ಲಿ ವರದಿಯಾದ ಒಟ್ಟು 851 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ 132 ಪ್ರಕರಣಗಳು ತಿರಸ್ಕೃತಗೊಂಡು, 716 ಅರ್ಹ ಪ್ರಕರಣಗಳೆಂದು ಪರಿಗಣಿಸಲಾಗಿದೆ. 2021-22ನೇ ಸಾಲಿನಲ್ಲಿ ವರದಿಯಾದ ಒಟ್ಟು 859 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ 112 ಪ್ರಕರಣಗಳು ತಿರಸ್ಕೃತಗೊಂಡಿದ್ದು, 702 ಅರ್ಹ ಪ್ರಕರಣಗಳೆಂದು ತೀರ್ಮಾನಿಸಲಾಗಿದೆ. 45 ಪ್ರಕರಣಗಳು ಇನ್ನೂ ತೀರ್ಮಾನಕ್ಕೆ ಬಾಕಿ ಇದೆ. ಕಳೆದ ಮೂರು ವರ್ಷಗಳಲ್ಲಿ ಅರ್ಹ 2,313 ರೈತರ ಆತ್ಮಹತ್ಯೆ ಪ್ರಕರಣಗಳಿಗೆ 115.65 ಕೋಟಿ ರೂ ಪರಿಹಾರ ವಿತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಗಂಭೀರವಾಗಿ ಪರಿಗಣಿಸಿರುವ ಸರ್ಕಾರ: ರೈತರ ಆತ್ಮಹತ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ರೈತರ ಶ್ರೇಯೋಭಿವೃದ್ಧಿಗೆ, ಅವರಲ್ಲಿ ಆತ್ಮ ಸ್ಥೈರ್ಯ ತುಂಬಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಸಹ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವುದು ಕಳವಳಕಾರಿಯಾಗಿದೆ. ರೈತರ ಆತ್ಮಹತ್ಯೆ ತಡೆಯಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ.
ಸ್ಥಳೀಯ ಸಾಲಗಾರರಿಂದ ರೈತರ ಶೋಷಣೆ ತಡೆಯುವ ಕುರಿತು ಉಸ್ತುವಾರಿ, ನಿಗಾ ವಹಿಸಲು ಜಿಲ್ಲಾ ಮಟ್ಟ ಮತ್ತು ಉಪವಿಭಾಗ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಯಲ್ಲಿ ಕಂದಾಯ, ಪೋಲೀಸ್, ಕೃಷಿ, ತೋಟಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ಅಧಿಕಾರಿಗಳು, ಸದಸ್ಯರಿದ್ದು, ದುಬಾರಿ ಬಡ್ಡಿಯಿಂದ ಬಾಧಿತರಾದ ರೈತರನ್ನು ರಕ್ಷಿಸಲು ಕ್ರಮ ವಹಿಸಲಾಗುತ್ತದೆ.
ಬೆಳೆ ವಿಮೆ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬೆಳೆ ವಿಮೆ ಯೋಜನೆ. ವಿಮಾ ಕಂತಿನ ಶೇ. 95 ರಿಂದ 98 ರಷ್ಟು ಮೊತ್ತವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪಾವತಿಸಲಾಗುತ್ತಿದೆ. ಇದರಿಂದಾಗಿ ಬೆಳೆ ನಷ್ಟ ಸಂಭವಿಸಿದರೂ ಸಹ ರೈತರಿಗೆ ಪರಿಹಾರ ದೊರೆಯುತ್ತದೆ. ಪ್ರಾಕೃತಿಕ ವಿಕೋಪಗಳಿಂದ ಬೆಳೆಹಾನಿ ಸಂಭವಿಸಿದಲ್ಲಿ ರಾಷ್ಟ್ರ ಹಾಗೂ ರಾಜ್ಯ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ರೈತರಿಗೆ ಪರಿಹಾರ ನೀಡಲಾಗುತ್ತಿದೆ.
ರಾಜ್ಯದಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6000 ರೂ.ಗಳ ನೆರವನ್ನು 2000 ರೂ. ಗಳಂತೆ ಮೂರು ಕಂತುಗಳಲ್ಲಿ, ನಾಲ್ಕು ತಿಂಗಳಿಗೊಮ್ಮೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಪಿ.ಎಂ ಕಿಸಾನ್ ಯೋಜನೆಯ ಎಲ್ಲ ಅರ್ಹ ರೈತರಿಗೆ ಹೆಚ್ಚುವರಿಯಾಗಿ 4000 ರೂ.ಗಳ ಆರ್ಥಿಕ ನೆರವನ್ನು ಎರಡು ಕಂತುಗಳಲ್ಲಿ ನೀಡಲಾಗುತ್ತಿದೆ.
ಬೆಲೆ ಕುಸಿತ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ಪ್ರೋತ್ಸಾಹಧನವನ್ನು ಒದಗಿಸಿ ರೈತರಿಂದ, ಉತ್ಪನ್ನಗಳನ್ನು ಖರೀದಿ ಮಾಡುತ್ತಿದೆ. ರಾಜ್ಯದಲ್ಲಿ ಬೆಳೆ ಸಾಲ ಸಹಾಯಧನ ಯೋಜನೆಯಯಡಿ ಶೇ.1ರ ಬಡ್ಡಿ, ರಿಯಾಯಿತಿ ಮಿತಿಯನ್ನು ರೂ. 50,000 ರೂ.ದಿಂದ 1,00,000 ರೂ.ವರೆಗೆ ಹೆಚ್ಚಿಸಲಾಗಿದೆ.
ಶೇ.50 ರಷ್ಟು ರಿಯಾಯಿತಿ:ಸಕಾಲದಲ್ಲಿ ಕೃಷಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಸರ್ಕಾರದಿಂದ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಉಪಕರಣದ ಕನಿಷ್ಠ ದರದ ಶೇ.50 ರಷ್ಟು ರಿಯಾಯಿತಿ ಮತ್ತು ಪ್ರಜಾ/ಪ.ಪಂ ವರ್ಗದ ರೈತರಿಗೆ ಶೇ.90 ರಷ್ಟು, ಗರಿಷ್ಠ ಮಿತಿ ಒಂದು ಲಕ್ಷ ರೂ.ವರೆಗೆ ಸಹಾಯಧನ ನೀಡಲಾಗುತ್ತಿದೆ. 45 ಹೆಚ್ಪಿಯವರೆಗಿನ ಟ್ರ್ಯಾಕರ್ಗಳಿಗೆ ಸಾಮಾನ್ಯ ವರ್ಗದ ರೈತರಿಗೆ 0.75 ಲಕ್ಷ ರೂ. ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೀಡಲಾಗುತ್ತಿದೆ. ರೈತರಿಗೆ ಶೇ.90 ಗರಿಷ್ಠ 3.00 ಲಕ್ಷ ರೂ. ವರೆಗೆ ಸಹಾಯಧನ ನೀಡಲಾಗುತ್ತಿದೆ.
ರೈತರಿಗೆ ಸಕಾಲದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಸಲುವಾಗಿ ಪ್ರತಿ ಹೋಬಳಿ ಕೇಂದ್ರದಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ(ಕೃಷಿ ಯಂತ್ರಧಾರೆ) ಗಳನ್ನು ನೋಂದಾಯಿತ ಚಾರಿಟಬಲ್ ಟ್ರಸ್ಟ್‌ಗಳು, ಸಂಘ ಸಂಸ್ಥೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಮೂಲಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕೃಷಿ ಮತ್ತು ಎಲ್ಲ ಅಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದ ಯೋಜನೆಗಳ ಬಗ್ಗೆ ರೈತರಿಗೆ ಅರಿವು ಮೂಡಿಸಲು ಹಾಗೂ ತಾಂತ್ರಿಕತೆಗಳನ್ನು ವರ್ಗಾಯಿಸಲು ಒಂದು ಏಕ ಗವಾಕ್ಷಿ ವ್ಯವಸ್ಥೆಯಾಗಿ ಕೃಷಿ ಅಭಿಯಾನ ಯೋಜನೆ ಇದೆ. ಕೃಷಿ ಉತ್ಪಾದನೆಯಲ್ಲಿ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಸೂಕ್ಷ್ಮ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿದೆ.
ರಾಜ್ಯದ ಎಲ್ಲಾ ವರ್ಗದ ರೈತರಿಗೆ 20 ಹೆಕ್ಟೇರ್ ಪ್ರದೇಶದವರೆಗೆ ತುಂತುರು ನೀರಾವರಿ ಘಟಕ ಅಳವಡಿಸಲು ಶೇ.90 ರಷ್ಟು ಸಹಾಯಧನ ನೀಡಲಾಗುತ್ತಿದೆ ಮತ್ತು 2 ಹೆಕ್ಟೇರ್ಗಿಂತ ಮೇಲ್ಪಟ್ಟು 5 ಹೆಕ್ಟೇರ್ ಪ್ರದೇಶದವರೆಗೆ ತುಂತುರು ನೀರಾವರಿ ಘಟಕ ಅಳವಡಿಸಲು ಶೇ.45ರಷ್ಟು ಸಹಾಯಧನ ನೀಡಲಾಗುತ್ತಿದೆ.