ಬೆಂಗಳೂರು:ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೂ ಮೀಸಲಾತಿ ಜಾರಿಗೆ ತಂದು ಎರಡು ವರ್ಷ ಸಮೀಪಿಸುತ್ತಿದೆ. ಆದರೆ ರಾಜ್ಯದಲ್ಲಿ ಇನ್ನೂ ಸಾಮಾನ್ಯ ವರ್ಗಕ್ಕಾಗಿನ ಮೀಸಲಾತಿ ಕಾರ್ಯರೂಪಕ್ಕೆ ಬಂದಿಲ್ಲ. ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಮೀಸಲಾತಿ ಜಾರಿ ಸದ್ಯ ಯಾವ ಹಂತದಲ್ಲಿದೆ, ವಿಳಂಬಕ್ಕೆ ಕಾರಣ ಏನು ಎಂಬ ವರದಿ ಇಲ್ಲಿದೆ.
ಕೇಂದ್ರ ಸರ್ಕಾರ ಜನವರಿ 2019ರಲ್ಲಿ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗಕ್ಕೂ 10% ಮೀಸಲಾತಿ ಜಾರಿಗೊಳಿಸಿತ್ತು. ಸಾಮಾನ್ಯ ವರ್ಗಕ್ಕೆ ಸೇರಿದ ವಾರ್ಷಿಕ 8 ಲಕ್ಷ ರೂ.ಗಳಿಗಿಂತ ಕಡಿಮೆ ಆದಾಯ ಹೊಂದಿರುವವರಿಗೆ ಅನ್ವಯವಾಗುವಂತೆ ಮೀಸಲು ಸೌಲಭ್ಯ ಕಲ್ಪಿಸಲಾಗಿದೆ. ಐದು ಎಕರೆಗಿಂತ ಕಡಿಮೆ ಕೃಷಿ ಭೂಮಿ, ಸಾವಿರ ಚದರ ಅಡಿಗಿಂತ ಕಡಿಮೆ ಅಳತೆಯ ಮನೆ, 100 ಯಾರ್ಡ್‌ಗಿಂತ ಕಡಿಮೆ ಅಳತೆಯ ವಸತಿ ನಿವೇಶನ ಹೊಂದಿದವರು ಈ ಮೀಸಲಾತಿ ಪಡೆಯಬಹುದು. ಇದು ಮೋದಿ ಸರ್ಕಾರದ ಮಹತ್ವದ ಘೋಷಣೆಯಾಗಿತ್ತು.
ಇದೀಗ ಈ ಮೀಸಲಾತಿ ಘೋಷಣೆಯಾಗಿ ಬಹುತೇಕ ಎರಡು ವರ್ಷ ಆಗುತ್ತಾ ಬಂದಿದೆ. ಆದರೆ ಕರ್ನಾಟಕದಲ್ಲಿ ಈ ಮೀಸಲಾತಿ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಈಗಾಗಲೇ ನೆರೆ ರಾಜ್ಯಗಳು ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗ (ಇಡಬ್ಲ್ಯುಎಸ್) ಮೀಸಲಾತಿಯನ್ನು ರಾಜ್ಯ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಜಾರೊಗೆ ತಂದಿವೆ. ಆದರೆ ಕರ್ನಾಟಕದಲ್ಲಿ ಮಾತ್ರ ಮೀಸಲಾತಿಯನ್ನು ಜಾರಿಗೆ ತರಲು ಸರ್ಕಾರ ಮೀನಾಮೇಷ ನೋಡುತ್ತಿದೆ.
ಈಗಾಗಲೇ ಎಸ್ಟಿ ಸಮುದಾಯ ಮೀಸಲಾತಿ ಮಿತಿ 7.5% ಹೆಚ್ಚಿಸಲು ಒತ್ತಡ ಹೇರುತ್ತಿದ್ದು, ಎಸ್ಸಿ ಸಮುದಾಯವೂ ಸದಾಶಿವ ಆಯೋಗದ ಶಿಫಾರಸ್ಸಿನಂತೆ ಮೀಸಲಾತಿ ಮಿತಿಯನ್ನು 17%ಗೆ ಹೆಚ್ಚಿಸಲು ಒತ್ತಡ ಹೇರುತ್ತಿದೆ. ಈ ಮಧ್ಯೆ ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಮೀಸಲಾತಿ ಜಾರಿ ಬಗ್ಗೆನೂ ಬಲವಾಗಿ ಕೂಗು ಕೇಳಿ ಬರುತ್ತಿದೆ.
ಇಡಬ್ಲ್ಯುಎಸ್ ಮೀಸಲಾತಿ ಜಾರಿಯ ಸ್ಥಿತಿಗತಿ ಹೇಗಿದೆ?:ರಾಜ್ಯದಲ್ಲಿ ಎರಡು ವರ್ಷ ಸಮೀಪಿಸುತ್ತಿದ್ದರೂ ಇಡಬ್ಲ್ಯುಎಸ್ ಮೀಸಲಾತಿ ಜಾರಿಗೆ ತರಲು ಸಾಧ್ಯವಾಗಿಲ್ಲ. ಸಿಎಂ ಯಡಿಯೂರಪ್ಪರಿಗೆ ಮೀಸಲಾತಿಯನ್ನು ಜಾರಿಗೆ ತರುವ ಇರಾದೆ ಇದೆ. ಆದರೆ ಕೆಲ ರಾಜಕೀಯ ಒತ್ತಡದಿಂದ ಮೀಸಲಾತಿ ಜಾರಿ ಸಾಧ್ಯವಾಗುತ್ತಿಲ್ಲ. ಈಗಾಗಲೇ ಸಾಮಾನ್ಯ ವರ್ಗದವರಿಗೆ ಆದಾಯ ಪ್ರಮಾಣಪತ್ರ ನೀಡಲು ಸರ್ಕಾರ ತಹಶೀಲ್ದಾರರಿಗೆ ಸೂಚನೆ ನೀಡಿದೆ. ಇತ್ತ ಮೀಸಲಾತಿಗಾಗಿನ ಕರಡು ಮಾರ್ಗಸೂಚಿ ಸಿದ್ಧವಾಗಿದೆ. ಸಂಪುಟ ಸಭೆಯಲ್ಲಿ ಚರ್ಚೆಯಾದ ಬಳಿಕ ಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮ ಅಧ್ಯಕ್ಷ ಸಚ್ಚಿದಾನಂದ ಮೂರ್ತಿ ತಿಳಿಸಿದ್ದಾರೆ.