ಬೆಂಗಳೂರು:ವಿಧಾನಸಭೆಯಲ್ಲಿ ಬುಧವಾರ ಬೆಂಗಳೂರು ಮಳೆ ಅನಾಹುತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಕೆ.ಜೆ.ಜಾರ್ಜ್, ಕೆರೆಗಳನ್ನು ಮುಚ್ಚಲು ಸೊಳ್ಳೆಗಳೇ ಕಾರಣ ಎಂದರು.
ಬೆಂಗಳೂರಿನಲ್ಲಿ ಮಳೆಯ ಅವಾಂತರಕ್ಕೆ ಕೆರೆಗಳನ್ನು ಮುಚ್ಚಿರುವುದು ಕಾರಣವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದರು. ಮೆಜೆಸ್ಟಿಕ್ ಬಸ್ ನಿಲ್ದಾಣ, ಡಾಲರ್ಸ್ ಕಾಲೋನಿಯನ್ನು ಕೆರೆಗಳನ್ನು ಮುಚ್ಚಿ ಕಟ್ಟಲಾಗಿದೆ. ಅಷ್ಟೇ ಅಲ್ಲ, ನಗರದಲ್ಲಿ ಸುಮಾರು 30 ಕೆರೆಗಳನ್ನು ಈ ರೀತಿ ಮುಚ್ಚಲಾಗಿದೆ. ಇದರಿಂದ ಇದೀಗ ಅನಾಹುತಗಳು ಸಂಭವಿಸುತ್ತಿವೆ ಎಂದು ವಿವರಿಸಿದರು.
ಮಾಜಿ ಸಚಿವ ಕೆಜೆ ಜಾರ್ಜ್ ಹೇಳಿಕೆ ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜೆ.ಜಾರ್ಜ್, ಕೆರೆ ಅಂದರೆ ಅದರಲ್ಲಿ ನೀರಿರಬೇಕು. ಆದರೆ, ಬೆಂಗಳೂರು ಬೆಳೀತಾ ಬೆಳೀತಾ ಕೆರೆಗಳಿಗೆ ಕೊಳಚೆ ನೀರು ಸೇರುವುದು ಹೆಚ್ಚಾಯಿತು. ಇದರಿಂದಾಗಿ ಸೊಳ್ಳೆಗಳ ಕಾಟ ಕ್ರಮೇಣ ಜಾಸ್ತಿಯಾಯಿತು. ಹಳೆಯದನ್ನು ಹೇಳಿ ಪ್ರಯೋಜನ ಇಲ್ಲ. ಈಗ ನಾವು ಇರುವ ಕೆರೆಗಳನ್ನು ಉಳಿಸುವ ಬಗ್ಗೆ ಯೋಚಿಸೋಣ. ನನ್ನ ಕ್ಷೇತ್ರದಲ್ಲಿ ಎರಡು ಕೆರೆಗಳಿವೆ. ಅವುಗಳ ಅಭಿವೃದ್ಧಿಗೆ ಸಿಎಂಗೆ ಪತ್ರ ಬರೆದಿದ್ದರೂ ಅದರ ಸುತ್ತ ಬೇಲಿ ಹಾಕಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ದೂರಿದರು.
ಆಗ ಮಧ್ಯಪ್ರವೇಶಿಸಿದ ಆಡಳಿತ ಪಕ್ಷ ಮುಖ್ಯ ಸಚೇತಕ ಸತೀಶ್ ರೆಡ್ಡಿ, ಬೊಮ್ಮನಹಳ್ಳಿಯಲ್ಲೂ ಕೆರೆಗಳಿಗೆ ಕೊಳಚೆ ನೀರು ಹೋಗುತ್ತಿದೆ. ಹಾಗಂತ ಆ ಕೆರೆಗಳನ್ನು ಮುಚ್ಚಲಾಗಿದೆಯೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಧು ಬಂಗಾರಪ್ಪ ನೇಮಕ