ಬೆಂಗಳೂರು:ನಾಯಕತ್ವ ಬದಲಾವಣೆಯ ಕೂಗು ಈ ಹಿಂದೆ ಎದ್ದಾಗ ಸ್ಪಷ್ಟ ಮಾತುಗಳಲ್ಲಿ ತಳ್ಳಿ ಹಾಕುತ್ತಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಇದ್ದಕ್ಕಿದ್ದಂತೆ ಇದೀಗ ಮೌನಕ್ಕೆ ಶರಣಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರು ಹೈಕಮಾಂಡ್ ಸಿಗ್ನಲ್ಗೆ ಕಾಯತೊಡಗಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಆಡಿಯೋ ಎನ್ನಲಾದ ಬಾಂಬ್ ದಾಳಿ ರಾಜ್ಯ ಬಿಜೆಪಿಯನ್ನು ತಲ್ಲಣಗೊಳಿಸಿದ ನಂತರ ಇನ್ನೇನು ಉಳಿದಿಲ್ಲ ಎಂಬ ತೀರ್ಮಾನಕ್ಕೆ ಬಂದಿರುವ ಬಹುತೇಕ ಶಾಸಕರು ಯಾವುದೇ ಚಕಾರ ಎತ್ತುವ ಗೋಜಿಗೆ ಹೋಗುತ್ತಿಲ್ಲ. ಖುದ್ದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಮೌನಕ್ಕೆ ಶರಣಾಗಿರುವ ರೀತಿ ಶಾಸಕರ ಬಾಯಿ ಬಂದ್ ಆಗುವಂತೆ ಮಾಡಿದೆ.
ಎರಡು ದಿನಗಳ ದೆಹಲಿ ಪ್ರವಾಸ ಮುಗಿಸಿ ಬಂದ ಸಿಎಂ ಬಿಎಸ್ವೈ, ನಾಯಕತ್ವ ಬದಲಾವಣೆಯನ್ನು ತಿರಸ್ಕರಿಸಿದ್ದರಾದರೂ, ಕಟೀಲ್ ಆಡಿಯೋ ಬಾಂಬ್ ಬಿದ್ದ ನಂತರ ಮೌನಕ್ಕೆ ಶರಣಾಗಿದ್ದಾರೆ. ನಿನ್ನೆ ಭೇಟಿಯಾದ ಮಠಾಧೀಶರ ಬಳಿ ಬದಲಾವಣೆಯ ಸಾಧ್ಯತೆಯನ್ನು ತಳ್ಳಿ ಹಾಕದ ಯಡಿಯೂರಪ್ಪ, ಹೈಕಮಾಂಡ್ ಆದೇಶ ಪಾಲಿಸದೆ ದಾರಿಯಿಲ್ಲ ಎಂಬಂತಾಗಿದೆ. ಅದೇ ರೀತಿ, ವರಿಷ್ಠರ ಸೂಚನೆಯ ವಿರುದ್ಧ ತಿರುಗಿ ಬೀಳಲಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಎಪ್ಪತ್ತೈದು ವರ್ಷ ದಾಟಿದ್ದರೂ ಹೈಕಮಾಂಡ್ ನನಗೆ ಅಧಿಕಾರ ನೀಡಿದೆ .ಅದಕ್ಕಾಗಿ ನಾನು ವರಿಷ್ಠರಿಗೆ ಕೃತಜ್ಞನಾಗಿದ್ದೇನೆ. ಅದೇ ರೀತಿ ನನ್ನ ಜೀವ ಇರುವವರೆಗೆ ನಾನು ಬಿಜೆಪಿಗಾಗಿ ಶ್ರಮಿಸುತ್ತೇನೆ ಎಂದು ಇಂದು ತಮ್ಮನ್ನು ಭೇಟಿ ಮಾಡಿದ ಸಿದ್ಧಗಂಗಾ ಶ್ರೀಗಳ ಬಳಿ ಬಿಎಸ್ವೈ ಹೇಳಿದ್ದಾರೆ ಎನ್ನಲಾಗಿದೆ.
ಹೀಗೆ ಮಠಾಧೀಶರ ಪಡೆ ತಮ್ಮನ್ನು ಬೆಂಬಲಿಸಿ ಬೀದಿಗಿಳಿದಿದ್ದರೂ ಯಡಿಯೂರಪ್ಪ ಮಾತ್ರ ವರಿಷ್ಠರ ಮಾತಿನಂತೆ ನಡೆಯುವುದಾಗಿ ಹೇಳಿರುವುದು ಬಿಜೆಪಿಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗುವ ಸ್ಪಷ್ಟ ಸೂಚನೆ ಎಂಬ ಭಾವನೆ ಶಾಸಕರಲ್ಲಿ ಬಂದಿದೆ. ಹೀಗಾಗಿ ಬಿಜೆಪಿ ಶಾಸಕಾಂಗ ಮುಂದಿನ ಬೆಳವಣಿಗೆಯನ್ನು ಕಾದು ನೋಡುತ್ತಿದ್ದು, ಮಠಾಧಿಪತಿಗಳ ಪಡೆ ಕೊನೇ ಹಂತದ ಕಸರತ್ತನ್ನು ಮುಂದುವರಿಸಿದೆ.
ಈ ಮಧ್ಯೆ ಕೊಳದ ಮಠದ ಶಾಂತವೀರ ಮಹಾಸ್ವಾಮಿಗಳು ಸೇರಿದಂತೆ ಕೆಲ ಮಠಾಧೀಶರು ಯಡಿಯೂರಪ್ಪ ಅವರನ್ನು ಬದಲಿಸಲು ನಮ್ಮ ಅಭ್ಯಂತರವಿಲ್ಲ,ಅದರೆ ಅವರನ್ನು ಬದಲಿಸುವುದಾದರೆ ಸಮುದಾಯದ ಬೇರೊಬ್ಬರನ್ನು ಸಿಎಂ ಹುದ್ದೆಗೆ ತರಬೇಕು ಎಂದಿದ್ದಾರೆ. ಅದು ಗಣಿ ಸಚಿವ ಮುರುಗೇಶ್ ನಿರಾಣಿ ಅವರೇ ಇರಬಹುದು ಅಥವಾ ಅರವಿಂದ ಬೆಲ್ಲದ್ ಅವರೇ ಇರಬಹುದು. ಒಟ್ಟಿನಲ್ಲಿ ಯಾರೇ ಇದ್ದರೂ ವೀರಶೈವ ಸಮುದಾಯದವರೇ ಮುಂದಿನ ಮುಖ್ಯಮಂತ್ರಿಗಳಾಗಲಿ. ಇಲ್ಲದಿದ್ದರೆ ಬಿಜೆಪಿ ನಾಶ ಖಂಡಿತ ಎಂದು ಹೇಳಿದ್ದಾರೆ.
ಪರಿಣಾಮವಾಗಿ ರಾಜ್ಯ ಬಿಜೆಪಿಯಲ್ಲಿ ಎದ್ದ ಕುದಿ ಬಹುತೇಕ ತಣ್ಣಗಾಗಿದ್ದರೆ, ಮಠಾಧಿಪತಿಗಳಿಂದ ಉಳಿಕೆ ಶಾಸ್ತ್ರ ನಡೆಯುತ್ತಿದೆ. ಆದರೆ ಒಂದೆರಡು ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ತಣ್ಣಗಾಗಲಿದ್ದು, ನಂತರ ವರಿಷ್ಠರು ನಾಯಕತ್ವದ ಆಟಕ್ಕೆ ಮಂಗಳ ಹಾಡಲಿದ್ದಾರೆ ಎಂದು ಮೂಲಗಳು ಹೇಳಿವೆ.