ಬೆಂಗಳೂರು: ಎತ್ತಿನಹೊಳೆ ಯೋಜನೆಗಾಗಿ ಪಶ್ಚಿಮಘಟ್ಟದಂತಹ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಹಾನಿ ಮಾಡಲಾಗ್ತಿದೆ. ಪಶ್ಚಿಮಘಟ್ಟದ ಒಂದು ಬೆಟ್ಟವನ್ನು ಮುಟ್ಟಿದರೂ ಮರ್ಮಾಂಗಗಳಿಗೆ ಕೈ ಹಾಕಿದ ಹಾಗೆ. ಮರ ಕಡಿದು, ಬೆಟ್ಟಗಳ ನಾಶ ಮಾಡಿದರೆ ನೀರು ಹುಟ್ಟಿಸಲು ಸಾಧ್ಯವಿಲ್ಲ ಎಂದು ಹಿರಿಯ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಎತ್ತಿನಹೊಳೆ ಯೋಜನೆ ವಿರುದ್ಧ ಮಾತನಾಡಿದರು.
ನಗರದ ಚಿತ್ರಕಲಾ ಪರಿಷತ್ನಲ್ಲಿ ಫೋಟೋ ಜರ್ನಲಿಸ್ಟ್ ಸುಧೀರ್ ಶೆಟ್ಟಿಯವರ ಎರಡು ದಿನಗಳ 'ನೇತ್ರಾವತಿ ನದಿಯನ್ನು ನುಂಗುತ್ತಿದೆಯಾ-ಎತ್ತಿನಹೊಳೆ ಯೋಜನೆ' ಎಂಬ ವಿಷಯಾಧಾರಿತ ಹದಿನೈದನೇ ನೈಜ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಮರಗಳು ಪಶ್ಚಿಮ ಘಟ್ಟದ ಪುಷ್ಪಗಿರಿ ಬೆಟ್ಟದಲ್ಲಿವೆ. ಗಾಳಿ, ಜೀವಜಲವನ್ನು ಪಶ್ಚಿಮ ಘಟ್ಟ ಇಂದು ಕೊಡುತ್ತಿದೆ.