ಕರ್ನಾಟಕ

karnataka

ETV Bharat / state

ಡಿಕೆಶಿ ಸಿಬಿಐ ಕೇಸ್ ವಾಪಸ್: ಪಾರದರ್ಶಕವಾಗಿದ್ದರೆ ಪ್ರಕರಣ ಹಿಂಪಡೆದಿದ್ದೇಕೆ ; ಕಟೀಲ್ ಪ್ರಶ್ನೆ - ಡಿಕೆಶಿ ಅಕ್ರಮ ಆಸ್ತಿಗಳಿಕೆ ಪ್ರಕರಣ

ಸಿಬಿಐ ತನಿಖೆಗೆ ನೀಡಿದ್ದ ಡಿಕೆಶಿ ಅಕ್ರಮ ಆಸ್ತಿಗಳಿಕೆ ಪ್ರಕರಣ ಆದೇಶ ಹಿಂಪಡೆದ ವಿಚಾರವಾಗಿ ಬಿಜೆಪಿ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

ಡಿಕೆಶಿ ಸಿಬಿಐ ಕೇಸ್ ವಾಪಾಸ್ ಬಗ್ಗೆ ಪ್ರತಿಕ್ರಿಯೆ
ಡಿಕೆಶಿ ಸಿಬಿಐ ಕೇಸ್ ವಾಪಾಸ್ ಬಗ್ಗೆ ಪ್ರತಿಕ್ರಿಯೆ

By ETV Bharat Karnataka Team

Published : Nov 24, 2023, 4:12 PM IST

Updated : Nov 24, 2023, 5:11 PM IST

ನಳಿನ್​ ಕುಮಾರ್​ ಕಟೀಲ್​ ಹೇಳಿಕೆ

ಮಂಗಳೂರು: ಸಚಿವ ಸಂಪುಟದಲ್ಲಿ ಡಿಕೆಶಿ ಸಿಬಿಐ ಕೇಸ್ ವಾಪಸ್ ಪಡೆದ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಸಂಸದ ನಳಿನ್ ಕುಮಾರ್ ಕಟೀಲ್, ಇವರು ಪ್ರಾಮಾಣಿಕರು, ಪಾರದರ್ಶಕವಾಗಿದ್ದರೆ ಕೇಸ್ ಹಿಂಪಡೆಯುವ ಅಗತ್ಯವಿಲ್ಲ. ಇವರಿಗೆ ಭಯ ಯಾಕೆ, ಇವರ ಪ್ರಾಮಾಣಿಕತೆ ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ ಎಂದು ಹೇಳಿದರು.

ಸಿಬಿಐ ತನಿಖೆ ಹೊತ್ತಲ್ಲಿ ಸರ್ಕಾರ ಕೇಸ್ ವಾಪಸ್ ಪಡೆಯುವುದು ಸರಿಯಲ್ಲ. ಇದು ಸರ್ಕಾರದ ಭ್ರಷ್ಟಾಚಾರವನ್ನು ಸಾರ್ವಜನಿಕವಾಗಿ ತಿಳಿಸುತ್ತದೆ. ಇದನ್ನು ನಾನು ಖಂಡಿಸುತ್ತೇನೆ. ಹಾಗಂತ ಇದೊಂದೇ ಕೇಸ್ ಇಲ್ಲ, ಜಾರಿ ನಿರ್ದೇಶನಾಲಯದಲ್ಲೂ ಸಾಕಷ್ಟು ಕೇಸ್​ಗಳಿವೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

ಬಸನಗೌಡ ಪಾಟೀಲ್​ ಯತ್ನಾಳ್​ ಪ್ರತಿಕ್ರಿಯೆ :ಕಾನೂನು ವ್ಯವಸ್ಥೆಯ ಅಣಕ ಮಾಡುವುದು ಕೆಲ ಪ್ರಭಾವಿ ರಾಜಕಾರಣಿಗಳಿಗೆ ಅಭ್ಯಾಸ ಆಗಿರುವುದು ದುರಂತ. ಸಚಿವ ಸಂಪುಟದಲ್ಲಿರುವ ಯಾವುದೇ ಸಚಿವರು ಇದು ಚರ್ಚೆಯಾಗಬೇಕು ಎಂದು ಹೇಳದೇ, ಇದಕ್ಕೆ ಒಪ್ಪಿಗೆ ನೀಡಿರುವುದು ಹಲವು ಸಂಶಯಗಳನ್ನು ಹುಟ್ಟು ಹಾಕುತ್ತದೆ. ಇವರು ಯಾವುದೇ ತಪ್ಪು ಮಾಡಿಲ್ಲ ಎಂದರೆ, ಸಿಬಿಐ ಮೇಲೆ ಭಯ ಏಕೆ? ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.

ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ದುರಂತದ ವಿಷಯವೇನೆಂದರೆ, ಸರ್ಕಾರದ ಪ್ರಭಾವಿ ರಾಜಕಾರಣಿಯ ಖಾಸಗಿ ವಕೀಲರು ಅಡ್ವೋಕೇಟ್ ಜೆನರಲ್ ಆಗಿ ಡಿ.ಕೆ.ಶಿವಕುಮಾರ್ ಮೇಲೆ ನಡೆಯುತ್ತಿದ್ದ ಸಿಬಿಐ ತನಿಖೆಗೆ ಸರ್ಕಾರದ ಅನುಮತಿ ಹಿಂಪಡೆಯಬೇಕೆಂದು ಸಂಪುಟಕ್ಕೆ ಶಿಫಾರಸು ಮಾಡುತ್ತಾರೆ. ಈ ಶಿಫಾರಸ್ಸಿನ ಕಾನೂನಿನ ಮಾನ್ಯತೆ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆಯೂ ಆಗದೇ ಅಂಗೀಕೃತವಾಗುತ್ತದೆ. ಇದು ಒಂದು ನಿಷ್ಪಕ್ಷಪಾತವಾದ ತನಿಖೆಗೆ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಮಾಡಿದ ಪ್ರಹಸನ. ನ್ಯಾಷನಲ್ ಲಾ ಸ್ಕೂಲ್ ನ 'ಪ್ರತಿಭೆ' ಶಶಿಕಿರಣ್ ಅವರು ಈ ರೀತಿ ವಿರೋಧಾತ್ಮಕ (contradictory) ಆಗಿ ಜವಾಬ್ದಾರಿಗಳನ್ನು (roles ) ಮಾಡಬಾರದು ಎಂದು ಹೇಳಿದ್ದಾರೆ.

ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಕೀಲರಾಗಿ ಅವರ ಹಲವು ಭ್ರಷ್ಟಾಚಾರದ ಪ್ರಕರಣವನ್ನು ಕೈಗೆತ್ತುಕೊಂಡು ವಾದ ಮಂಡಿಸಿದ್ದರು. ರಾಜ್ಯದ ಅಧೀನದಲ್ಲಿರುವ ಪೊಲೀಸರಿಗೆ ಒಪ್ಪಿಸಿದರೆ ಒಬ್ಬ ಪ್ರಭಾವಿ ರಾಜಕಾರಣಿಯ ಕರ್ಮಕಾಂಡವನ್ನು ಸುಲಭವಾಗಿ ಮುಚ್ಚಿಹಾಕಬಹುದು ಎಂದು ಇವರ ಯೋಜನೆ ಎಂಬುದು ಗೊತ್ತಿರುವ ವಿಷಯ. ಖಾಸಗಿ ವಕೀಲರನ್ನು ಅಡ್ವೊಕೆಟ್ ಜನರಲ್ ಹುದ್ದೆಗೆ ನೇಮಿಸಿದ್ದು ಮತ್ತು ಇದೆ ಪ್ರಕರಣವನ್ನು ಅವರು ಶಿಫಾರಸು ಮಾಡುತ್ತಾರೆ ಎಂದರೆ ಇದು Contradiction ಆಗುವುದಿಲ್ಲವೇ ಎಂದು ಯತ್ನಾಳ್ ಪ್ರಶ್ನೆ ಮಾಡಿದ್ಧಾರೆ.

ಸಿ.ಟಿ. ರವಿ ಟೀಕೆ:ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಮಾಜಿ ಸಚಿವ ಸಿ.ಟಿ. ರವಿ, ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆಯುವ ಮೂಲಕ ಭ್ರಷ್ಟಾಚಾರ ಪ್ರಕರಣದಲ್ಲಿ ತಪಿತಸ್ಥರೆಂಬುದು ಸಿದ್ದರಾಮಯ್ಯ ಸರ್ಕಾರ ಪರೋಕ್ಷವಾಗಿ ಒಪ್ಪಿಕೊಂಡಿದೆ ಎಂದು ಟೀಕಿಸಿದ್ದಾರೆ. ''ಪ್ರಜಾಪ್ರಭುತ್ವ ಮತ್ತು ನೈತಿಕತೆಯ ಬಗ್ಗೆ ಯಾವಾಗಲೂ ಉಪನ್ಯಾಸ ನೀಡುವ ಕಾಂಗ್ರೆಸ್, ತನಿಖಾ ಸಂಸ್ಥೆಗಳಿಗೆ ತಮ್ಮ ಕೆಲಸ ಮಾಡಲು ಅವಕಾಶ ನೀಡಬೇಕು ಮತ್ತು ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ. ಶಿವಕುಮಾರ್ ಅವರ ಮನೆಯಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದ್ದು, ಆದಾಯಕ್ಕೂ ಮೀರಿದ ಆಸ್ತಿ ಸಂಪಾದನೆಯಲ್ಲಿ ತಪ್ಪಿತಸ್ಥರು ಎಂಬುದು ಬಹಳ ಸ್ಪಷ್ಟವಾಗಿದೆ'' ಎಂದಿದ್ದಾರೆ.

ಶಿವಕುಮಾರ್ ದೋಷಿ ಎಂದು ಸಾಬೀತಾದರೆ ಅವರು ಜೈಲಿಗೆ ಹೋಗುವುದು ಮಾತ್ರವಲ್ಲದೆ, ಭ್ರಷ್ಟಾಚಾರದ ಹಣ ಪಡೆದ ಅವರ ಯಜಮಾನರು ಕೂಡ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣದಿಂದಲೇ ಕಾಂಗ್ರೆಸ್ ಸರ್ಕಾರ ಸಿಬಿಐ ತನ್ನ ಸಾಂವಿಧಾನಿಕ ಕರ್ತವ್ಯವನ್ನು ಮಾಡದಂತೆ ತಡೆಯಲು ಹೊರಟಿದೆ ಎಂದು ಸಿ.ಟಿ. ರವಿ ದೂರಿದ್ದಾರೆ.

ಅಶ್ವತ್ಥನಾರಾಯಣ ಪ್ರತಿಕ್ರಿಯೆ:ಡಿ.ಕೆ. ಶಿವಕುಮಾರ್​ಗೆ ಜೈಲಿಗೆ ಹೋಗುವ ಭಯ ಬಂದಿದೆ. ಹಾಗಾಗಿ, ಸರ್ಕಾರ ಸಿಬಿಐ ಪ್ರಕರಣವನ್ನು ವಾಪಸ್ ಪಡೆದಿದೆ ಎಂದು ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಕೇಸ್ ವಾಪಸ್ ಪಡೆಯಲಾಗಿದೆ. ಈಗಾಗಲೇ ಸಿಬಿಐ ವಿಚಾರಣೆ ಬಹುತೇಕ ‌ಮುಗಿಸಿದೆ. ಈ ಸಮಯದಲ್ಲಿ ಕೇಸ್ ಯಾಕೆ ವಾಪಸ್ ತೆಗೆದುಕೊಂಡರು. ಇದನ್ನು ಬಿಜೆಪಿ ಖಂಡಿಸುತ್ತದೆ. ಸದನದ ಒಳಗೆ- ಹೊರಗೆ ಬಿಜೆಪಿ ಹೋರಾಟ‌ ಮಾಡುತ್ತದೆ. ಜನರು 135 ಸೀಟು ಕೊಟ್ಟಿದ್ದಾರೆ ಅಂತ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ತಪ್ಪು ನಿರ್ಣಯ ಮಾಡಿದ್ದರೆ, ಇವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬೇಕಿತ್ತು. ಆದರೆ ಯಾಕೆ ಅವರು ಅದನ್ನ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ತನಿಖೆಗೆ ನೀಡಿದ್ದ ಆದೇಶ ವಾಪಸ್​ ಪಡೆದ ಸರ್ಕಾರ

Last Updated : Nov 24, 2023, 5:11 PM IST

ABOUT THE AUTHOR

...view details