ಬೆಂಗಳೂರು:ವೇತನ ಪರಿಷ್ಕರಣೆಗಾಗಿ ಮುಷ್ಕರದಲ್ಲಿ ಭಾಗಿಯಾಗಿ ಸೇವೆಯಿಂದ ವಜಾಗೊಂಡಿದ್ದ ರಸ್ತೆ ಸಾರಿಗೆ ನೌಕರರಿಗೆ ಸಾರಿಗೆ ಸಚಿವ ಶ್ರೀರಾಮುಲು ಪುನರ್ ನೇಮಕಾತಿ ಆದೇಶವನ್ನು ವಿತರಿಸಿದರು. ಕೆಎಸ್ಆರ್ ಟಿಸಿ ಕೇಂದ್ರ ಕಚೇರಿಯಲ್ಲಿ ವಜಾಗೊಂಡಿದ್ದ 54 ಜನ ನೌಕರರಿಗೆ ಮರು ನೇಮಕಾತಿ ಆದೇಶವನ್ನು ವಿತರಿಸಲಾಗಿದೆ.
2021ರ ಏಪ್ರಿಲ್ ತಿಂಗಳಿನಲ್ಲಿ ವೇತನ ಪರಿಷ್ಕರಣೆಗಾಗಿ ಸಾರಿಗೆ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆ ಮುಷ್ಕರನಿರತ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ವಜಾಗೊಂಡ ನೌಕರರನ್ನು ಹಂತಹಂತವಾಗಿ ಮರುನೇಮಕ ಮಾಡಿಕೊಳ್ಳಲಾಗುತ್ತಿದೆ. ಅದರ ಭಾಗವಾಗಿ ಶುಕ್ರವಾರ 54 ಮಂದಿ ನೌಕರರಿಗೆ ಮರು ನೇಮಕಾತಿ ಆದೇಶ ವಿತರಿಸಲಾಯಿತು. ಸಾರಿಗೆ ಸಚಿವ ಶ್ರೀರಾಮುಲು ಮರು ನೇಮಕಾತಿ ಆದೇಶ ಪತ್ರ ವಿತರಿಸಿದರು.
2021ರಲ್ಲಿ ಮಾಜಿ ಸಚಿವ ಲಕ್ಷಣ ಸವದಿ ಸಾರಿಗೆ ಸಚಿವರಾಗಿದ್ದಾಗ ಸಾರಿಗೆ ನೌಕರರು ದೀರ್ಘ ಕಾಲದ ಮುಷ್ಕರ ನಡೆಸಿದ್ದರು. ಮುಷ್ಕರ ನಿರತ ನೂರಾರು ಸಾರಿಗೆ ನೌಕರರನ್ನು ಅಂದಿನ ಯಡಿಯೂರಪ್ಪ ನೇತೃತ್ವದ ಸರ್ಕಾರ ವಜಾ ಮಾಡುವ ಮೂಲಕ ಸಾರಿಗೆ ಸಿಬ್ಬಂದಿಗಳ ಮೇಲೆ ಒತ್ತಡ ಹಾಕಿತ್ತು. ನೂರಾರು ನೌಕರರನ್ನ ವಜಾ ಮಾಡಿದ ಬೆನ್ನಲೆ ಒಬ್ಬೊಬ್ಬರಾಗಿ ನೌಕರರು ಸರ್ಕಾರ ಬಿಗಿ ಪಟ್ಟಿಗೆ ಮಣಿದು ಕೆಲಸಕ್ಕೆ ಹಾಜರಾಗಿದ್ದರು.
ಅಂದಿನಿಂದ ಇವತ್ತಿನವರೆಗೆ ಮತ್ತೆ ವಜಾಗೊಂಡಿದ್ದ ಸಿಬ್ಬಂದಿಯನ್ನು ಕೆಲಸಕ್ಕೆ ವಾಪಸ್ ನೇಮಿಸಬೇಕು ಎಂಬ ಕೂಗು ಕೇಳಿ ಬರುತ್ತಲೇ ಇತ್ತು. ಶ್ರೀರಾಮುಲು ಸಾರಿಗೆ ಸಚಿವರಾಗಿ ಅಧಿಕಾರ ವಹಸಿಕೊಂಡ ಬಳಿಕ ವಜಾಗೊಂಡಿದ್ದ ಸಾರಿಗೆ ಸಿಬ್ಬಂದಿಗಳನ್ನು ಮರುನೇಮಕ ಮಾಡಲು ನಿರ್ಧರಿಸಲಾಯಿತು. ಅದರ ಮೂಲಕ ಈಗ ಹಂತ ಹಂತವಾಗಿ ಮರುನೇಮಕಾತಿ ಮಾಡಲು ಉದ್ದೇಶಿಸಲಾಗಿದೆ.
2021ರ ಏಪ್ರಿಲ್ ನಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರ 15 ದಿನಗಳ ಕಾಲ ಸುದೀರ್ಘವಾಗಿ ನಡೆದಿತ್ತು. ಈ ವೇಳೆ ಸರ್ಕಾರ ಖಾಸಗಿ ಬಸ್ಗಳನ್ನು ಓಡಿಸಿತ್ತು. ಅಂದಿನ ಬಿಎಸ್ ವೈ ಸರ್ಕಾರ ಸೇವೆಗೆ ಮರಳುವಂತೆ ಮುಷ್ಕರ ನಿರತರಿಗೆ ನಾನಾ ರೀತಿಯಲ್ಲಿ ಮನವಿ ಮಾಡಿತ್ತು. ಆದರೂ ಸಿಬ್ಬಂದಿಗಳು ತಮ್ಮ ಹೋರಾಟವನ್ನು ಬಿಡಲಿಲ್ಲ. ಹೀಗಾಗಿ ಮುಷ್ಕರ ಕೈ ಬಿಡದ ಸಿಬ್ಬಂದಿಗಳನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ನಂತರ ವಜಾಗೊಂಡಿದ್ದ ಸಾರಿಗೆ ಸಿಬ್ಬಂದಿ ಮರುನೇಮಕಾತಿಗಾಗಿ ಸರ್ಕಾರವನ್ನು ಒತ್ತಾಯಿಸುತ್ತಿದ್ದರು.
ವಜಾದಿಂದ ಆತ್ಮಹತ್ಯೆಗೆ ಶರಣಾದ ಸಿಬ್ಬಂದಿ: ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿ ಕೆಲಸದಿಂದ ವಜಾಗೊಂಡಿದ್ದ ಬಿಎಂಟಿಸಿ ಚಾಲಕ ಅಲ್ಲದೆ ನಿರ್ವಾಹಕನಾಗಿದ್ದ ಸಿಬ್ಬಂದಿಯು ಆತ್ಮಹತ್ಯೆಗೆ ಶರಣಾಗಿದ್ದರು. ವಿನೋದ್ ಕುಮಾರ್ (42) ನೇಣಿಗೆ ಶರಣಾಗಿರುವ ವ್ಯಕ್ತಿ. ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ವೀರಾಪೂರ ಗ್ರಾಮದ ಮನೆಯಲ್ಲಿ ವಿನೋದ್ ಕುಮಾರ್ ನೇಣಿಗೆ ಶರಣಾಗಿದ್ದರು. ಕೆಲಸದಿಂದ ವಜಾಗೊಂಡಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಹೀಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದ ಎನ್ನಲಾಗಿದೆ.
2021ರಲ್ಲಾದ ಮುಷ್ಕರಕ್ಕೆ ಕಾರಣ?:2021ರಲ್ಲಿ ರಾಜ್ಯವೇ ಪರದಾಡುವಂತೆ ಸಾರಿಗೆ ನೌಕರರ ಮುಷ್ಕರ ಅಷ್ಟರ ಮಟ್ಟಿಗೆ ಬಿಸಿ ಮುಟ್ಟಿಸಿತ್ತು. 6ನೇ ವೇತನದ ಪರಿಷ್ಕರಣೆಗಾಗಿ ನೌಕರರು ಈ ಹೋರಾಟ ಮಾಡಿದ್ದರು. ಏಪ್ರಿಲ್ 7ರ ಮಧ್ಯಾಹ್ನದಿಂದಲೇ ಸಾರಿಗೆ ನಿಗಮಗಳ ನೌಕರರು ಮುಷ್ಕರ ಆರಂಭಿಸಿದ್ದರು. ಒಟ್ಟು 15 ದಿನಗಳ ಮುಷ್ಕರ ನಡೆಸಿದ ನೌಕರರು ಕೊನೆಗೆ ಹೈಕೋರ್ಟ್ ನ್ಯಾಯ ಮೂರ್ತಿಗಳ ಸೂಚನೆಗೆ ತಲೆಬಾಗಿ ಅಲ್ಲಿಗೆ ಮುಷ್ಕರಕ್ಕೆ ಅಂತ್ಯ ಹಾಡಿದ್ದರು.
ಗೌರವಿಸಿ ಅಂತ್ಯಗೊಳಿಸಿದ ಮುಷ್ಕರ:2021 ಕೋವಿಡ್ ಸಮಯ. ಹಾಗಾಗಿ ಹೈಕೋರ್ಟ್ ಕೋವಿಡ್ ಸಂಕಷ್ಟ ಸಮಯದಲ್ಲಿ ಜನರಿಗೆ ತೊಂದರೆ ಉಂಟುಮಾಡಬಾರದೆಂದು ನ್ಯಾಯಾಲಯ ಸೂಚನೆ ನೀಡಿತ್ತು. ಅದನ್ನು ಗೌರವಿಸಿ ನೌಕರರು ತಮ್ಮ ಮುಷ್ಕರವನ್ನು ಅರ್ಧಕ್ಕೆ ಕೈ ಬಿಟ್ಟಿದ್ದರು.
ಇದನ್ನೂ ಓದಿ: ಹುಬ್ಬಳ್ಳಿ ನೈಋತ್ಯ ರೈಲ್ವೆ ಕಾರ್ಯವೈಖರಿಗೆ ಪ್ರಯಾಣಿಕರು ಖುಷ್.. ದ್ವಿಪಥ ಮಾರ್ಗದಲ್ಲಿ 130 ಕಿ ಮೀ ವೇಗದಲ್ಲಿ ಓಡಲಿವೆ ರೈಲುಗಳು