ಬೆಂಗಳೂರು: ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವೆ ಐಪಿಎಲ್ ಪಂದ್ಯ ನಡಯಲಿದೆ. ಈ ಹಿನ್ನೆಲೆ ಚಿನ್ನಸ್ವಾಮಿ ಮೈದಾನದ ಸುತ್ತಮುತ್ತ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.
ಈ ಸ್ಥಳಗಲ್ಲಿ ವಾಹನ ನಿಲುಗಡೆಗೆ ಅವಕಾಶವಿರುವುದಿಲ್ಲ: ಸಂಜೆ 4 ಗಂಟೆಯಿಂದ ರಾತ್ರಿ 11 ಗಂಟೆಯವರೆಗೂ ಕ್ವೀನ್ಸ್ ರಸ್ತೆ, ಎಂ.ಜಿ.ರಸ್ತೆ, ಕಬ್ಬನ್ ರಸ್ತೆ, ರಾಜಭವನ ರಸ್ತೆ, ಸೆಂಟ್ರಲ್ ಸ್ಟ್ರೀಟ್, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ, ಕಸ್ತೂರಬಾ ರಸ್ತೆ, ಅಂಬೇಡ್ಕರ್ ವೀದಿ, ಟ್ರಿನಿಟಿ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಠಲ್ ಮಲ್ಯ ರಸ್ತೆ ಹಾಗೂ ನೃಪತುಂಗ ರಸ್ತೆಗಳಲ್ಲಿ ಸಂಪೂರ್ಣವಾಗಿ ವಾಹನ ನಿಲುಗಡೆಗೆ ನಿರ್ಬಂಧವಿರಲಿದೆ.
ವಾಹನ ನಿಲುಗಡೆಗೆ ಅವಕಾಶವಿರುವ ಸ್ಥಳಗಳು:ಕಿಂಗ್ಸ್ ರಸ್ತೆ, ಯು.ಬಿ.ಸಿಟಿಯ ಪಾರ್ಕಿಂಗ್, ಶಿವಾಜಿನಗರ ಬಿಎಂಟಿಸಿ ನಿಲ್ದಾಣದ ಮೊದಲ ಮಹಡಿ, ಓಲ್ಡ್ ಕೆಜಿಐಡಿ ಕಟ್ಟಡ, ಕಂಠೀರವ ಕ್ರೀಡಾಂಗಣ, ಬಿ.ಆರ್.ವಿ ಮೈದಾನದ ಮೆಟ್ರೋ ಲೇನ್ ಕೆಳಗೆ ವಾಹನಗಳ ನಿಲುಗಡೆಗೆ ಅವಕಾಶವಿರಲಿದೆ.
ಪೊಲೀಸ್ ಬಿಗಿ ಬಂದೋಬಸ್ತ್: ಅಲ್ಲದೇ ನಾಳೆ ಪಂದ್ಯಕ್ಕೆ ಪೊಲೀಸರಿಂದ ಭರ್ಜರಿ ಸಿದ್ದತೆ ನಡೆದಿದೆ. ಎರಡು ವರ್ಷಗಳ ಬಳಿಕ ಪಂದ್ಯ ವೀಕ್ಷಣೆಗೆ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ಆಗಮಿಸುವ ನಿರೀಕ್ಷೆಯಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗಾಗಿ 612 ಜನ ಪೊಲೀಸ್ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿದ್ದು ಇಬ್ಬರು ಡಿಸಿಪಿಗಳು, 10 ಮಂದಿ ಎಸಿಪಿ, 30 ಇನ್ಸ್ಪೆಕ್ಟರ್ ಗಳು, 78 ಪಿಎಸ್ಐ,16 ಎಎಸ್ಐ, 51 ಮಹಿಳಾ ಸಿಬ್ಬಂದಿ, ಹಾಗೂ ಹೆಡ್ ಕಾನ್ಸ್ಟೇಬಲ್ಸ್ , ಕಾನ್ಸ್ಟೇಬಲ್ಸ್ ಸಹಿತ 412 ಜನ ಸೇರಿದಂತೆ ಒಟ್ಟು 612 ಜನ ಸಿಬ್ಬಂದಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ. ಅಲ್ಲದೇ ಮಫ್ತಿಯಲ್ಲಿಯೂ ಸಹ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ.
ಪಂದ್ಯದ ಬಗ್ಗೆ ಮಾಹಿತಿ:ನಾಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ 2023 16ನೇ ಆವೃತ್ತಿಯ 5ನೇ ಪಂದ್ಯ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಸೆಣಸಲಿವೆ. ಆರ್ಸಿಬಿ ಮೊದಲ ಪಂದ್ಯವನ್ನು ತವರಿನಲ್ಲಿ ಆಡುವ ಮೂಲಕ ಕಪ್ ಗೆಲ್ಲುವ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಮುಂಬೈ ಮತ್ತು ಆರ್ಸಿಬಿ ಪಂದ್ಯದ ಟಿಕೆಟ್ಗಳು ಈಗಾಗಲೇ ಮಾರಾಟವಾಗಿವೆ.
ಇನ್ನು ಕಳೆದ ವರ್ಷ ರಾಯಲ್ ಚಾಲೆಂರ್ಸ್ ಬೆಂಗಳೂರು (RCB) ಪ್ಲೇ ಆಫ್ ಹಂತದ ವರೆಗೂ ತಲುಪಿ, ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸೋಲುವ ಮೂಲಕ ಐಪಿಎಲ್ ಜರ್ನಿಯನ್ನು ಮುಕ್ತಾಯಗೊಳಿಸಿತ್ತು. ಇದೀಗ ಹೊಸ ಋತುವಿನಲ್ಲಿ ಆರ್ಸಿಬಿ ಚೊಚ್ಚಲ ಐಪಿಎಲ್ ಟ್ರೋಪಿಯನ್ನು ಗೆಲ್ಲುವ ಭರವಸೆಯಲ್ಲಿ ಕಣಕ್ಕಿಳಿಯಲಿದೆ. ಆರ್ಸಿಬಿ ತಂಡವನ್ನು ದಕ್ಷಿಣ ಆಫ್ರಿಕಾದ ಬ್ಯಾಟರ್ ಫಾಫ್ ಡು ಪ್ಲೆಸಿಸ್ ಮುನ್ನಡೆಸಲಿದ್ದಾರೆ. ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವನಿಂದು ಹಸರಂಗ ತಂಡದ ಪ್ರಮುಖ ಆಟಗಾರರಾಗಿದ್ದಾರೆ.
ಮತ್ತೊಂದೆಡೆ, ಮುಂಬೈ ಇಂಡಿಯನ್ಸ್ (MI), ಕಳೆದ ವರ್ಷ ಕಳಪೆ ಪ್ರದರ್ಶನ ತೋರಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನುಕ್ಕೆ ಜಾರಿತ್ತು. ಆಡಿದ್ದ 14 ಪಂದ್ಯಗಳ ಪೈಕಿ ಕೇವಲ ನಾಲ್ಕನ್ನು ಮಾತ್ರ ಮುಂಬೈ ಗೆದ್ದಿತ್ತು. ಇದೀಗ 6ನೇ ಬಾರಿಗೆ ಕಪ್ ಗೆಲ್ಲುವ ವಿಶ್ವಾಸದೊಂದಿಗೆ ರೋಹಿತ್ ಶರ್ಮಾ ಸಾರಥ್ಯದ ಮುಂಬೈ ನಾಳೆ ಟ್ರೋಫಿ ಗೆಲುವಿನ ಅಭಿಯಾನವನ್ನು ಪ್ರಾರಂಭಿಸಲಿದೆ.
ಮುಂಬೈ ಪರ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ವೇಗಿ ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರರಾಗಿ ತಂಡ ಯಾರನ್ನು ಅಖಾಡಕ್ಕಿಳಿಸಲಿದೆ ಎಂಬುದನ್ನು ಗೌಪ್ಯವಾಗಿಟ್ಟಿದೆ. ಬುಮ್ರಾ ಬದಲಿ ಆಟಗಾರರಾಗಿ ಯಾರು ಕಣಕ್ಕಳಿಯಲಿದ್ದಾರೆ ಎಂಬ ಕುತೂಹಲ ಕ್ರಿಕೆಟ್ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ:ಭಾನುವಾರ ಬೆಂಗಳೂರು ವಿರುದ್ಧ ಮುಂಬೈ ಪಂದ್ಯ.. ಆರ್ಸಿಬಿ ವಿರುದ್ಧ ಕಣಕ್ಕಿಳಿಯಲಿರುವ ರೋಹಿತ್ ಶರ್ಮಾ